ಉಡುಪಿ : ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭಾಂಶ ನೀಡುವುದಾಗಿ ನಂಬಿಸಿ ಉಪ್ಪುಂದ ನಿವಾಸಿ ಜಯಂತ್‌ ಎಂಬವರಿಗೆ ಆರೋಪಿಯೊಬ್ಬ ಬರೋಬ್ಬರಿ 26,55,000ರೂ. ಪಂಗನಾಮ ಹಾಕಿದ ಬಗ್ಗೆ ನಗರದ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಉಡುಪಿಯ ಉಪ್ಪುಂದ ನಿವಾಸಿ ಜಯಂತ್‌ ಎಂಬವರಿಗೆ 2 ವರ್ಷಗಳ ಹಿಂದೆ ಟೆಲಿಗ್ರಾಂ ಮೂಲಕ ಕಾರ್ತಿಕ್‌ ಎಂಬಾತನ ಪರಿಚಯವಾಗಿದ್ದು, ಅದೇ ವ್ಯಕ್ತಿ ಕಳೆದ ಜನವರಿ 15ರಂದು ವಾಟ್ಸಪ್ ಮೂಲಕ ಜಯಂತ್‌ಗೆ ಕರೆ ಮಾಡಿ ಹಣ ಹೂಡಿಕೆ ಮಾಡಿದಲ್ಲಿ ಉತ್ತಮ ಲಾಭಾಂಶ ನೀಡುವುದಾಗಿ ತಿಳಿಸಿದ್ದ.

ಈ ವೇಳೆ ಜಯಂತ್ ಅಪರಿಚಿತನ ಗುರುತು ಕೇಳಿದಾಗ ಮಂಗಳೂರಿನ ಕಸಬಾ ಬೆಂಗ್ರೆ ನಿವಾಸಿ ಮಹಮ್ಮದ್‌ ಶಫೀಕ್‌ ಎಂಬಾತನ ಆಧಾರ್‌ ಕಾರ್ಡ್‌ ಪ್ರತಿ, ಪಾಸ್‌ಪೋರ್ಟ್‌ ಪ್ರತಿ ಮತ್ತು ಭಾವಚಿತ್ರ ವಾಟ್ಸಪ್ ಮೂಲಕ ಬಂದಿತ್ತು. ಬಳಿಕ ವಾಟ್ಸಪ್‌ ಮೂಲಕ ಮೇಸೆಜ್‌ ಮತ್ತು ಕರೆಯನ್ನು ಮಾಡಿದ್ದ ಶಫೀಕ್ ಶೇರು ಮಾರ್ಕೇಟ್‌‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಗಳಿಸಬಹುದೆಂದು ಮತ್ತೆ ನಂಬಿಸಿದ್ದ.

ಈ ಹಿನ್ನೆಲೆ ಆರೋಪಿ ಮಹಮ್ಮದ್‌ ಶಫೀಕ್‌ ನೀಡಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಒಟ್ಟು ರೂಪಾಯಿ 26,55,000ರೂ. ಹಣವನ್ನು ಜಯಂತ್ ವರ್ಗಾವಣೆ ಮಾಡಿದ್ದರು. ಆದರೆ, ಈವರೆಗೆ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶವನ್ನಾಗಲೀ ವಾಪಾಸು ನೀಡದೇ ಆರೋಪಿ ಶಫೀಕ್ ಮೋಸ ಮಾಡಿ ಪರಾರಿಯಾಗಿದ್ದಾನೆ. ದೂರಿನ ಹಿನ್ನೆಲೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.