ಭಟ್ಕಳ: ಮಾಟ-ಮಂತ್ರ ಮಾಡಿಸಿ ತಂದೆಯ ಸಾವಿಗೆ ಕಾರಣರಾಗಿದ್ದೀರಿ ಎಂದು ಆರೋಪಿಸಿ ದಂಪತಿ ಮೇಲೆ ಹಲ್ಲೆ ನಡೆಸಿದ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಕೆ ಸಮೀಪದ ಅಬ್ಬಿಹಿತ್ತಿನಲ್ಲಿ ನಡೆದಿದೆ.

ಈ ಸಂಬಂಧ ಅಬ್ಬಿಹಿತ್ತಿನ ನಿವಾಸಿ ಶ್ರೀಮತಿ ಜ್ಯೋತಿ (41) ಅವರು ನೀಡಿದ ದೂರಿನ ಮೇರೆಗೆ ದೇವಿದಾಸ ಮಾದೇವ ನಾಯ್ಕ (42) ಹಾಗೂ ವೆಂಕಟೇಶ ಮಾದೇವ ನಾಯ್ಕ (37), ಇಬ್ಬರೂ ಹೊನ್ನೆಮಡಿ, ಬೆಳಕೆ ನಿವಾಸಿಗಳ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಆರೋಪಿತರ ತಂದೆ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದರು. ಅವರ ಯೋಗಕ್ಷೇಮ ವಿಚಾರಿಸಲು ಜುಲೈ 26ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಜ್ಯೋತಿ, ಅವರ ಪತಿ ಹಾಗೂ ಕುಟುಂಬದ ಸದಸ್ಯರು ಆರೋಪಿತರ ಮನೆಗೆ ತೆರಳುತ್ತಿದ್ದ ವೇಳೆ, ಆರೋಪಿಗಳು ದಾರಿಯಲ್ಲಿ ತಡೆದಿದ್ದಾರೆ ಎನ್ನಲಾಗಿದೆ.

ಈ ವೇಳೆ, “ಮಾಟ-ಮಂತ್ರ ಮಾಡಿಸಿ ನಮ್ಮ ತಂದೆಯ ಸಾವಿಗೆ ಕಾರಣರಾಗಿದ್ದೀರಿ, ನಮ್ಮ ಮನೆಗೆ ಬರಬೇಡಿ” ಎಂದು ಆರೋಪಿತರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜ್ಯೋತಿ ಅವರ ಪತಿಗೆ ಆರೋಪಿ ವೆಂಕಟೇಶ ನಾಯ್ಕ ಕೈಯಿಂದ ಹಲ್ಲೆ ನಡೆಸಿದ್ದು, ಬಳಿಕ ದೇವಿದಾಸ ನಾಯ್ಕ ತನ್ನ ಕಾರಿನಲ್ಲಿ ಇದ್ದ ಸ್ಟೀಲ್ ರಾಡ್‌ ತೆಗೆದು ಜ್ಯೋತಿ ಅವರ ಪತಿಯ ತಲೆಯ ಎಡಭಾಗಕ್ಕೆ ಹೊಡೆದು ಗಾಯಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಗಲಾಟೆ ಬಿಡಿಸಲು ಮುಂದಾದ ಜ್ಯೋತಿ ಅವರ ಮೇಲೂ ಕೈಯಿಂದ ಹಲ್ಲೆ ನಡೆಸಿ, ಅವರ ಪತಿ ಹಾಗೂ ಮಕ್ಕಳಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.