ಕಾರವಾರ: ಕಾರವಾರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಂಗಣವನ್ನು ಇನ್ನು ಸರ್ಕಾರಿ ಇಲಾಖೆಗಳು, ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಸ್ವಯಂಸೇವಾ ಸಂಘಗಳು (NGOs) ಹಾಗೂ ಸಾರ್ವಜನಿಕರು ಬಾಡಿಗೆ ಆಧಾರದ ಮೇಲೆ ವಿವಿಧ ಕಾರ್ಯಕ್ರಮಗಳಿಗಾಗಿ ಬಳಸಿಕೊಳ್ಳಬಹುದಾಗಿದೆ.

ವಿಜ್ಞಾನ ಕೇಂದ್ರ ಆರಂಭವಾದ ದಿನದಿಂದಲೇ ಈ ಸೌಲಭ್ಯವನ್ನು ನಿಗದಿತ ಷರತ್ತುಗಳು ಮತ್ತು ನಿಯಮಾವಳಿಗಳೊಂದಿಗೆ ಕಲ್ಪಿಸಲಾಗಿದ್ದು, ಸಭಾಂಗಣದ ಬಳಕೆ ಹಾಗೂ ದಿನಕ್ಕೆ ₹2 ಸಾವಿರ ಬಾಡಿಗೆ ದರವನ್ನು ಆಡಳಿತ ಮಂಡಳಿ (Governing Body) ಅನುಮೋದಿಸಿದೆ. ಈ ನಿಯಮ ಎಲ್ಲ ಅರ್ಹ ಅರ್ಜಿದಾರರಿಗೆ ಯಾವುದೇ ಭೇದಭಾವವಿಲ್ಲದೆ ಸಮಾನವಾಗಿ ಅನ್ವಯವಾಗಲಿದೆ.

ಸಭಾಂಗಣದಲ್ಲಿ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ತರಬೇತಿ ಕಾರ್ಯಕ್ರಮಗಳು, ಶೈಕ್ಷಣಿಕ ಹಾಗೂ ಜನಜಾಗೃತಿ ಕಾರ್ಯಕ್ರಮಗಳು, ಸಮುದಾಯ ಸಭೆಗಳು, ಸನ್ಮಾನ ಸಮಾರಂಭಗಳು, ಪದವಿ ಪ್ರದಾನ ಸಮಾರಂಭಗಳು, ಜನ್ಮದಿನ ಆಚರಣೆಗಳು ಸೇರಿದಂತೆ ವಿಜ್ಞಾನ ಕೇಂದ್ರದ ಉದ್ದೇಶಗಳಿಗೆ ಧಕ್ಕೆ ಉಂಟುಮಾಡದ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿದೆ.

ಸಭಾಂಗಣವನ್ನು ಬಳಸಲು ಆಸಕ್ತರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಕಾರವಾರದ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಸಭಾಂಗಣದ ಲಭ್ಯತೆ ಪರಿಶೀಲಿಸಿ, ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ಬಳಿಕ ಬುಕ್ಕಿಂಗ್‌ಗೆ ಅನುಮೋದನೆ ನೀಡಲಾಗುವುದು ಎಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.