Karwar| ಇತ್ತೀಚಿನ ದಿನಗಳಲ್ಲಿ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ‌ ಬಾರಿ ವಂಚನೆ‌ ಹೆಚ್ಚುತ್ತಿದೆ. ಪ್ರಧಾನಿ‌ ಮೋದಿಯಿಂದ ಹಿಡಿದು ನಟ ಅಮಿತಾಭ್ ಬಚ್ಚನ್ ವರೆಗೂ ಈ ವಂಚನೆಯ ಬಗ್ಗೆ ದಿನಬೆಳಗಾದರೆ ಟಿವಿ ಸಾಮಾಜಿಕ ಜಾಲತಾಣಗಳಲ್ಲಿ ಜನತೆಯನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ ಇಲ್ಲೊಬ್ಬ ವ್ಯಕ್ತಿ ಈ ಡಿಜಿಟಲ್ ವಂಚನೆಯಿಂದ ಬರೊಬ್ಬರಿ 1.74 ಕೋಟಿ ಕಳೆದುಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಎಲ್ಐಸಿ‌ ಏಜೆಂಟ್ ‌ಹಾಗೂ ರೈತರೂ ಆಗಿರುವ ಉಮ್ಮಚಗಿಯ ಶಿವಾನಂದ ಹೆಗಡೆ‌ (69) ಎಂಬುವರೇ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಉಂಡೆನಾಮ ತಿಕ್ಕಿಸಿಕೊಂಡವರು.

ಘಟನೆಯ ವಿವರ: ಏ. 21 ರಂದು ಶಿವಾನಂದ ಹೆಗಡೆಯವರಿಗೆ ಮೊಬೈಲ್ ನಂಬರ: +917502502510 ರಿಂದ ಕರೆ ಬಂದಿದೆ. ಕರೆ ಮಾಡಿರುವ ವ್ಯಕ್ತಿಯು ತಾನು ಮುಂಬೈ ಪೊಲೀಸ ಹೆಡ್‌ಕ್ವಾರ್ಟಸ್‌ದಿಂದ ಕರೆ ಮಾಡುವುದಾಗಿ ಹೇಳಿ, ಯಾರೋ ಉಗ್ರಗಾಮಿಗಳು ನಿಮ್ಮ ಹೆಸರಿನಲ್ಲಿರುವ ಆಧಾರ ಕಾರ್ಡನ್ನು ಬಳಸಿಕೊಂಡು ಕೆನರಾ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದು ಅದರಿಂದ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ. ಹೀಗಾಗಿ ನಿಮ್ಮ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯ ಮೇಲೆ ಮನಿ ಲಾಂಡ್ರಿಂಗ್ ನಡೆಸಿದ ಬಗ್ಗೆ ಮುಂಬೈ ಕ್ರೈಂ ಬ್ರಾಂಚ್‌ ನಲ್ಲಿ  FIR ದಾಖಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಶಿವಾನಂದ ಹೆಗಡೆಯವರ ಹೆಸರಿರುವ ಕೆನರಾ ಬ್ಯಾಂಕ ಎ.ಟಿ.ಎಮ್ ಕಾರ್ಡನ್ನು ವಾಟ್ಸಪ್ ಮುಖಾಂತರ ಅವರಿಗೆ ಕಳುಹಿಸಿಕೊಟ್ಟು, ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗುವುದಾಗಿ ಬೆದರಿಸಿದ್ದಾರೆ.

 ಆಗ ಹೆದರಿದ ಹೆಗಡೆಯವರು, ತಾನು ಯಾವುದೇ ತರಹದ ತಪ್ಪು ಮಾಡಿಲ್ಲಾ ಹಾಗೂ ಯಾವುದೇ ತರಹದ ಅವ್ಯವಹಾರದಲ್ಲಿ ಭಾಗಿಯಾಗಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ಆಗ ವಂಚಕ ನಮ್ಮ ಹಿರಿಯ ಅಧಿಕಾರಿ ನಿಮಗೆ ಕರೆ ಮಾಡುತ್ತಾರೆ. ನೀವು ಅವರೊಂದಿಗೆ ಮಾತನಾಡಿ. ಅವರೇ ನಿಮಗೆ ಏನಾದರೂ ಪರಿಹಾರ ಸೂಚಿಸಬಹುದು ಅಂತಾ ಹೇಳಿದ್ದಾನೆ.

ಅದರಂತೆ ಐಪಿಎಸ್ ಎಂದು ಹೇಳಿಕೊಂಡು ಪೋಲಿಸರ‌ ಸಮವಸ್ತ್ರ ಧರಿಸಿದ್ದ ಇನ್ನೊಬ್ಬ ವಂಚಕ ಅದೇ  +917502502510 ನಂಬರ್ ನಿಂದ‌‌ ಹೆಗಡೆಯವರಿಗೆ‌ ವಿಡಿಯೋ ಕಾಲ್ ಮಾಡಿ, ನಾವು ನಿಮಗೆ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದೇವೆ. ನೀವು ನಿಮ್ಮ ಖಾತೆಯಲ್ಲಿರುವ ಹಣವನ್ನು ರಿಸರ್ವ ಬ್ಯಾಂಕಗೆ ಜಮಾ ಮಾಡಬೇಕಾಗುತ್ತದೆ. ನಾವು ತನಿಖೆ ಮಾಡಿ ನೀವು ಯಾವುದೇ ಅವ್ಯವಹಾರದಲ್ಲಿ ಭಾಗಿಯಾಗಿಲ್ಲಾ ಅಂತಾ ಕಂಡು ಬಂದರೆ ನಿಮ್ಮ ಹಣವನ್ನು ಮರಳಿ ನಿಮ್ಮ ಖಾತೆಗೆ ಜಮಾ ಮಾಡುವುದಾಗಿ ಹೇಳಿದ್ದಾನೆ. ಇನ್ನು ನಾವು ಹೇಳುವವರೆಗೂ ಈ ವಿಷಯದ ಬಗ್ಗೆ ಯಾರಲ್ಲಿಯೂ ಚರ್ಚಿಸಬಾರದು. ಬಾಯ್ಬಿಟ್ಟರೆ ಅರೆಸ್ಟ್ ಮಾಡಿಕೊಂಡು ಹೋಗುವುದಾಗಿ ಶಿವಾನಂದ‌ ಹೆಗಡೆಗೆ ಬೆದರಿಸಿದ್ದಾನೆ.

ನಂತರ ಅದೇ ನಂಬರ್ ನಿಂದ ಡಿಐಜಿ ಎಂದು ಹೇಳಿಕೊಂಡು ಪೋಲಿಸ್ ಸಮವಸ್ತ್ರ ಧರಿಸಿದ್ದ  ಇನ್ನೊಬ್ಬ ಖದೀಮ   ವಿಡಿಯೋ ಕಾಲ್ ಮಾಡಿ, ಪ್ರಕರಣದ ತನಿಖೆಯನ್ನು ತಾನೇ ನಡೆಸುತ್ತಿದ್ದೇನೆ, ಕೂಡಲೇ ಹಣ ತಮಗೆ ವರ್ಗಾವಣೆ ಮಾಡುವಂತೆ ತಿಳಿಸಿದ್ದಾನೆ. ಆಗ‌ ಹೆಗಡೆಯವರು ತನ್ನ ಹಣ ಪಿಕ್ಸಡ್ ಡಿಪಾಸಿಟ್‌ ದಲ್ಲಿದ್ದು. ಅದನ್ನು ತೆಗೆದು ವರ್ಗಾವಣೆ ಮಾಡಲು ಸಮಯಾವಕಾಶ ನೀಡುವಂತೆ ಕೋರಿಕೊಂಡಿದ್ದಾರೆ. ಆಗ ಆ ವಂಚಕ ನೀವು ಹಣ ವರ್ಗಾವಣೆ ಮಾಡುವವರೆಗೆ ನಿಮ್ಮ ಪ್ರತಿದಿನದ ಲೊಕೇಶನ ಹಾಗೂ ಪೊಟೋವನ್ನು ತಮ್ಮ ಮೊಬೈಲ್ ಫೋನ್ ಗೆ ವಾಟ್ಸ್ ಆಪ್ ಮಾಡಬೇಕು ಎಂದು ಎಚ್ಚರಿಸಿದ್ದಾನೆ. ಕೊನೆಗೆ ಇವೆಲ್ಲವನ್ನೂ  ಸತ್ಯವೆಂದು ನಂಬಿದ ಅಮಾಯಕ ಹೆಗಡೆಯವರು ತಮ್ಮ‌ ಬ್ಯಾಂಕ್ ಖಾತೆಯಿಂದ ದಿನಾಂಕ: 21.04.2026 ರಿಂದ 24.04.2026 ರ ವರೆಗೆ ಒಟ್ಟೂ ₹ 1 ಕೋಟಿ 74 ಲಕ್ಷ ಐವತ್ತು ಸಾವಿರ ವರ್ಗಾವಣೆ ಮಾಡಿದ್ದಾರೆ.

ಕೆಲ‌ ದಿನಗಳ ನಂತರ ತಾನು ಮೋಸ‌ ಹೋಗಿರುವುದನ್ನು ಅರಿತ ಶಿವಾನಂದ ಹೆಗಡೆ ಕಾರವಾರ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.