Bhatkal| ಪ್ರಯಾಣಿಕನಿಗೆ ನಿದ್ದೆ ಬರುವ ಔಷಧಿ ಮಿಶ್ರಿತ ಲಾಡು ತಿನ್ನಿಸಿ, ಬ್ಯಾಗ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಕಳವು ಮಾಡಿದ ಶಾಕಿಂಗ್ ಘಟನೆ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ.
ಮುರುಡೇಶ್ವರದ ನ್ಯಾಷನಲ್ ಕಾಲೋನಿಯ ಮಹಮ್ಮದ್ ಖಾಸೀಮ್ ಹಸನ್‌ಬಾಬು (60) ಎಂಬುವರೇ ವಂಚನೆಗೆ ಒಳಗಾದ ಪ್ರಯಾಣಿಕ. ಅವರ ದೂರಿನ ಮೇರೆಗೆ ಮುರುಡೇಶ್ವರದ ಶೇಖ್ ರಿಯಾಜ್ ಗಿಡ್ಡಣ್ಣನವರ ಹಾಗೂ ಆತನ ವಿಚ್ಛೇದಿತ ಪತ್ನಿ ತಾಸೀನ್ ಭಾವಾಅಮೀರ್ ಮಂಕಿಕರ್ ವಿರುದ್ಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ? ಮೇ 3ರಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಭಟ್ಕಳದಿಂದ ಹೊರಟಿದ್ದ ಮಂಗಳ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಮ್ಮದ್ ಖಾಸೀಮ್ ಪ್ರಯಾಣಿಸುತ್ತಿದ್ದರು. ಈ ವೇಳೆ ತಾಸೀನ್ ಪರಿಚಯ ಬೆಳೆಸಿ ಲಾಡು ನೀಡಿದ್ದಾಳೆ ಎನ್ನಲಾಗಿದೆ. ಲಾಡು ತಿಂದ ಕೆಲವೇ ಹೊತ್ತಿನಲ್ಲಿ ಖಾಸೀಮ್ ಅವರಿಗೆ ತೀವ್ರ ನಿದ್ದೆ ಆವರಿಸಿದೆ. ಅವರು ಗಾಢ ನಿದ್ದೆಗೆ ಜಾರಿದ ಬಳಿಕ, ಅವರ ಬ್ಯಾಗ್‌ನಲ್ಲಿದ್ದ ಸುಮಾರು ₹4.75 ಲಕ್ಷ ನಗದು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಾರವಾರದಲ್ಲೇ ರೈಲಿನಿಂದ ಇಳಿದ ಆರೋಪಿ? ಹಣ ಕಳವು ಮಾಡಿದ ಬಳಿಕ ತಾಸೀನ್ ಕಾರವಾರ ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿದು ಪರಾರಿಯಾಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಗೆ ಸಂಬಂಧಿಸಿ ಶೇಖ್ ರಿಯಾಜ್ ಸಹ ಕೈಜೋಡಿಸಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.
ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
