Sirsi| ಎರಡನೇಯ ಮದುವೆಯ ಸಿದ್ಧತೆಯಲ್ಲಿದ್ದ ವೈದ್ಯನನ್ನು ಮಾರಕ ಅಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ ಘಟನೆ ಶಿರಸಿಯ ಕೆಎಚ್‌ಬಿ ಕಾಲೋನಿಯಲ್ಲಿ ನಡೆದಿದೆ.
ಡಾ. ರಮೇಶ್ ಕಲಘುಟಕರ್ (51) ಎಂಬಾತನೇ ಹತ್ಯೆಗೊಳಗಾದವ. ಈತ ಆಯುರ್ವೇದ ವೈದ್ಯನಾಗಿದ್ದ. ಶಿರಸಿಯ ಕೆ.ಎಚ್.ಬಿ ಕಾಲೋನಿಯಲ್ಲಿ ವಾಸವಿದ್ದ. ಐದು ತಿಂಗಳ ಹಿಂದೆ ಈತನ ಹೆಂಡತಿ ಮೃತಪಟ್ಟಿದ್ದಳು. ಹೀಗಾಗಿ ಎರಡನೇ ವಿವಾಹ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದ, ಏ.19 ಕ್ಕೆ ಈ ವಿವಾಹ ನಿಶ್ಚಯವಾಗಿತ್ತು.
ಆದರೆ ಶನಿವಾರ ಏ.18ರ ರಾತ್ರಿಯೇ ಅಪರಿಚಿತರು ವೈದ್ಯ ಕಲಗುಟಕರ್ ಮನೆಗೆ ನುಗ್ಗಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಅಲ್ಲದೇ ಈ ಕೃತ್ಯ ಎಸಗಿದ ನಂತರ ಮನೆಯ ಮುಂದಿನ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಮಾರನೇ ದಿನ ವೈದ್ಯನ ಸಹೋದರ ಮನೆ ಬಾಗಿಲ ಬೀಗ ಮುರಿದು ತೆಗೆದು ಮನೆಯೊಳಗೆ ಹೋದಾಗ ಪಘಟನೆ ಬೆಳಕಿಗೆ ಬಂದಿದೆ.
ಮೃತರಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಬೆಂಗಳೂರಿನಲ್ಲಿ ಹಾಗೂ ಇನ್ನೊಬ್ಬ ಉತ್ತರಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆನ್ನಲಾಗಿದೆ. ಹತ್ಯೆಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಮಾರುಕಟ್ಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ತಿಳಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶ್ವಾನ ದಳದೊಂದಿಗೆ ಡಿಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮ ಹಾಗೂ ಮಾರುಕಟ್ಟೆ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
