Karwar| ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ್ ಮೇಲೆ ಅಂಕೋಲಾದಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ನಾಲ್ಕು ಮಂದಿ ಆರೋಪಿಗಳ ಗುರುತು ಹಾಗೂ ಕೊಲೆ ಯತ್ನದ ಉದ್ದೇಶವನ್ನು ಪೊಲೀಸರು ಕೊನೆಗೂ ಬಯಲಿಗೆಳೆದಿದ್ದಾರೆನ್ನಲಾಗಿದೆ.

ಆರೋಪಿಗಳ ಫೋಟೊಗಳು newswaveskannada.comಗೆ ದೊರಕಿದ್ದು, ಈ ಆರೋಪಿಗಳು ಗೋವಾದವರಾಗಿದ್ದು, ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ. ಮೂಲಗಳ ಪ್ರಕಾರ ವ್ಯವಹಾರ ಸಂಬಂಧಿಸಿ ನಡೆದ ಕೊಲೆಯತ್ನ ಎಂದೆನ್ನಲಾಗಿದ್ದು, ಸಂಪೂರ್ಣ ತನಿಖೆ ಮುಗಿಯುವವರೆಗೆ ಪೊಲೀಸರು ಆರೋಪಿಗಳ ಹೆಸರು ಬಹಿರಂಗಗೊಳಿಸದೇ ಸದ್ಯ ಸೀಕ್ರೆಟ್ ಇಟ್ಟಿದ್ದಾರೆ. ಆದರೆ, ಈ ಕೃತ್ಯ ಎಸಗಿದವರು ಯಾರು ? ಯಾವ ಉದ್ದೇಶದಿಂದ ಕೊಲೆ ಮಾಡಿದ್ರು ? ಎಲ್ಲಾ ವಿಚಾರಗಳು ಈಗಾಗಲೇ ಪೊಲೀಸರ ದೊಣ್ಣೆಯೇಟಿನ ಮುಂದೆ ಬಹುತೇಕ ಬೆತ್ತಲೆಯಾಗಿವೆ ಎನ್ನಲಾಗಿದೆ.

ಬುಧವಾರ ಹಾಡುಹಗಲೇ ಅಂಕೋಲಾದ ಜನನಿಬಿಡ ಪ್ರದೇಶವಾದ ಶ್ರೀ ಕಣಕಣೇಶ್ವರ ದೇವಸ್ಥಾನದ ಬಳಿ ಆರೋಪಿಗಳು ಗೋವಾ ನೋಂದಣಿಯ GA05 D0338 ಸಂಖ್ಯೆಯಲ್ಲಿ ಕಾರಿನಲ್ಲಿ ಬಂದು ಗೋಪಾಲಕೃಷ್ಣ ಅವರನ್ನು ಹಿಂಬಾಲಿಸಿ ಬಳಿಕ ಮಾರಕಾಸ್ತ್ರಗಳಿಂದ ಗೋಪಾಲಕೃಷ್ಣ ಅವರ ತಲೆ ಹಾಗೂ ಕುತ್ತಿಗೆಭಾಗಕ್ಕೆ ಹಲ್ಲೆ ಮಾಡಿದ್ದರು. ತಕ್ಷಣ ಸಮೀಪದ ಬ್ಯಾಂಕ್ ಒಂದರ ಒಳಗೆ ಹೋಗಿ ಬಾಗಿಲು ಹಾಕಿದ್ದರಿಂದ ಅವರ ಜೀವ ಉಳಿದುಕೊಂಡಿತ್ತು ಎನ್ನಲಾಗಿದೆ.

ಘಟನೆಗೂ ಮುನ್ನ ಮೂರು ದಿನಗಳ ಕಾಲ ಅಂಕೋಲಾದ ಖಾಸಗಿ ಹೋಟೆಲ್‌‌ನಲ್ಲಿ ತಂಗಿದ್ದ ಆರೋಪಿಗಳು ಹೋಟೆಲ್ ಸಿಬ್ಬಂದಿ ಜತೆಯೂ ಗಲಾಟೆ ಮಾಡಿದ್ದರು. ಕೃತ್ಯದ ಬಳಿಕ ಗೋವಾಕ್ಕೆ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಮಾಜಾಳಿ ಚೆಕ್‌ಪೋಸ್ಟ್ ಬಳಿ ಆರೋಪಿಗಳನ್ನು ಬಂಧಿಸಿದ್ದರು. ಕದ್ರಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸಿ ಕೃತ್ಯದ ಉದ್ದೇಶ, ಹಿಂದಿರುವ ಕೈವಾಡದ ಬಗ್ಗೆ ಆರೋಪಿಗಳಿಂದ ಬಾಯಿ ಬಿಡಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಇನ್ನು ಗಂಭೀರ ಗಾಯಗೊಂಡಿದ್ದ ಗೋಪಾಲಕೃಷ್ಣ ಅವರನ್ನು ನಿನ್ನೆಯೇ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆ ತರಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧಿಸಿ ಪೊಲೀಸರ ತನಿಖೆ ಮುಂದುವರಿದಿದೆ.