ಮಣಿಪಾಲ: ಸಿಂಗಾಪುರ ಮೂಲದ ಕಂಪೆನಿಯ ಷೇರುಗಳ ಆಮಿಷವೊಡ್ಡಿ, ಉಡುಪಿಯ ತಂತ್ರಜ್ಞಾನ ಕಂಪೆನಿಯೊಂದಕ್ಕೆ ಬರಬೇಕಿದ್ದ ಸುಮಾರು 33 ಕೋ.ರೂ. ಹಣವನ್ನು ನೀಡದೆ ನಂಬಿಸಿ ಮೋಸ ಮಾಡಿರುವ ಗಂಭೀರ ಪ್ರಕರಣ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಉಡುಪಿ ಶಿವಳ್ಳಿ ಗ್ರಾಮದ ನಿವಾಸಿ ದೀಲಿಪ್ ಆರ್. ಅಡಿಗ (35) ಅವರು ಲಕ್ಷ್ಮೀಂದ್ರ ನಗರದಲ್ಲಿ ‘ಎಂಎನ್ ಶೆಟ್ಟಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪೆನಿಯನ್ನು ನಡೆಸುತ್ತಿದ್ದಾರೆ. ಇವರ ಕಂಪೆನಿಯಲ್ಲಿ ತಯಾರಾಗುವ ‘ಸಿಎಂಎಸ್’ ಉತ್ಪನ್ನ ಖರೀದಿಸುವ ನೆಪದಲ್ಲಿ ಸಿಂಗಾಪುರದ ‘ಇನ್ಫೋಮೋ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್’ (infomo Global PTV.Ltd) ಕಂಪೆನಿಯ ಸಿಇಒ ಆನಂದ ರಾವ್ ಅವರು ಸಂಪರ್ಕಿಸಿದ್ದರು. 2019ರ ಅಕ್ಟೋಬರ್‌ 6ರಂದು ನಡೆದ ಮಾತುಕತೆಯಲ್ಲಿ, 35 ಲಕ್ಷ ರೂ. ನಗದು ಹಾಗೂ ಕಂಪೆನಿಯ 17.5 ಲಕ್ಷ ಷೇರುಗಳನ್ನು ನೀಡುವುದಾಗಿ ಆನಂದ ರಾವ್ ಭರವಸೆ ನೀಡಿದ್ದ.

ಈ ಷೇರುಗಳ ಮೌಲ್ಯ 3 ವರ್ಷಗಳ ಬಳಿಕ 33 ಕೋಟಿ ರೂ. ಆಗಲಿದೆ ಮತ್ತು ಇಡೀ ಕಂಪೆನಿಯ ಮೌಲ್ಯ 9 ಸಾವಿರ ಕೋಟಿ ರೂ. ದಾಟಲಿದೆ ಎಂಬ ಸುಳ್ಳು ಮಾಹಿತಿಯನ್ನು ನೀಡಿದ್ದ ಆನಂದ್ ರಾವ್. ಅಲ್ಲದೇ, 2020ರ ಎಪ್ರಿಲ್‌ 5ರಂದು ನಡೆದ ಒಪ್ಪಂದದ ವೇಳೆ ಕಂಪೆನಿಯಲ್ಲಿ 35 ಮಿಲಿಯನ್ ಷೇರುಗಳಿವೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನಂಬಿಸಲಾಗಿತ್ತು.

ಒಪ್ಪಂದದಂತೆ ಉಡುಪಿ ಮೂಲದ ಕಂಪೆನಿ ಮಾಲಕ ದೀಲಿಪ್ ಅವರು ತಮ್ಮ ಸಾಫ್ಟ್‌ವೇರ್ ಉತ್ಪನ್ನವನ್ನು ಸಿಂಗಾಪುರ ಕಂಪೆನಿಗೆ ಹಸ್ತಾಂತರಿಸಿದ್ದರು. ಮೂರು ವರ್ಷಗಳ ಒಪ್ಪಂದದ ಅವಧಿ ಮುಗಿದ ಬಳಿಕ (06.04.2023), ನಿಯಮದಂತೆ ಬರಬೇಕಾದ ವ್ಯಾಲ್ಯೂಷನ್ ವರದಿ ಮತ್ತು ಹಣದ ಬಗ್ಗೆ ದೀಲಿಪ್ ಅವರು ಇ-ಮೇಲ್ ಮೂಲಕ ವಿಚಾರಿಸಿದಾಗ ಕಂಪೆನಿ ಸಬೂಬು ಹೇಳಲು ಆರಂಭಿಸಿತ್ತು.

ಬಳಿಕ ಕಂಪೆನಿಯ ಪಾಲುದಾರರಾದ ಶ್ಯಾಮ್‌ದೀಪ್ ಅವರಿಗೆ ಇ-ಮೇಲ್ ಮೂಲಕ ಒಪ್ಪಂದದ ಧೃಡಪಡಿಸಿ, ಬಳಿಕ ವೀರಪ್ಪನ್ ಸುಬ್ರಹ್ಮಣ್ಯ ಎಂಬಾತನ ಮೂಲಕ ಕರೆ ಮಾಡಿಸಿದ ಆರೋಪಿ ಆನಂದ್, 6.9ಕೋಟಿ ರೂ. ನಗದು ಹಾಗೂ 20 ಲಕ್ಷ ರೂ. ಮೌಲ್ಯದ ಷೇರ್ ನೀಡುವುದಾಗಿ ನಂಬಿಸಿ ಮತ್ತೆ ಕಾಲಹರಣ ಮಾಡಿದ್ದ. ಆದರೆ, ದಿಲೀಪ್ ಅವರ ಕಂಪೆನಿಗೆ ನೀಡಬೇಕಾಗಿದ್ದ ಸುಮಾರು 33 ಕೋಟಿ ರೂ. ನೀಡುವ ಯೋಚನೆಯನ್ನೇ ಆರೋಪಿ ಕೈಬಿಟ್ಟಿದ್ದ.

ಇನ್ನು ಈ ಆರೋಪಿ ಸಿಂಗಾಪುರ ಕಂಪೆನಿಯ ಸಿಇಒ ಆನಂದ್ ರಾವ್, ಕಂಪೆನಿಯ ಚೇರ್ಮನ್ ಪೀಟರ್ ಜಫ್ರಿ ಜರ್ಮೈನ್, ಸಿಟಿಒ ರಾಘವೇಂದ್ರ ಅಗರವಾಲ, ನಿರ್ದೇಶಕಿ ಸ್ಮಿತಾ ಶಾಹು, ಬೋರ್ಡ್ ಸದಸ್ಯ ಅಸುತೋಷ್ ಶ್ರೀವತ್ಸಾವ ವಿರುದ್ಧ ದೀಲಿಪ್ ಅಡಿಗ ಅವರು ನಂಬಿಕೆ ದ್ರೋಹ ಹಾಗೂ ಮೋಸ ಮಾಡಿದ ವಿಚಾರದಡಿ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.