Karwar| ಸದಾಶಿವಗಡದ ಯಮಹಾ ಬೈಕ್ ಶೋರೂಮಿನ ಮ್ಯಾನೇಜರ್ ವಿವೇಕ ದೇವಾಡಿಗ ಅವರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ.
ಈ ಬಗ್ಗೆ ಚಿತ್ತಾಕುಲ ಠಾಣೆಯಲ್ಲಿ ದೂರು ದಾಖಲಿಸಿರುವ ವಿವೇಕನ ತಂದೆ ಕೃಷ್ಣ ಯಂಕಾ ದೇವಾಡಿಗಾ, ತನ್ನ ಮಗ ವಿವೇಕ ಕೃಷ್ಣ ದೇವಾಡಿಗ ಕಳೆದ ಎರಡುವರೆ ವರ್ಷದಿಂದ ಕಾರವಾರದಲ್ಲಿ ನೆಲೆಸಿದ್ದು, ಸದಾಶಿವಗಡದಲ್ಲಿರುವ ಯಮಹಾ ಶೋರೂಮಿನಲ್ಲಿ ಅವರು ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದರು. ಅಲ್ಲಿಯೇ ಬಾಡಿಗೆ ಮನೆಪಡೆದು ವಾಸವಾಗಿದ್ದರು.
ಮಾರ್ಚ 3ರ ರಾತ್ರಿ 11 ಗಂಟೆಗೆ ವಿವೇಕ ದೇವಾಡಿಗ ಮನೆಯವರಿಗೆ ಕೊನೆಯದಾಗಿ ಫೋನ್ ಮಾಡಿ, `ಶಿರಸಿ ಜಾತ್ರೆಗೆ ಬರುವೆ’ ಎಂದು ಅವರು ಆ ಫೋನಿನಲ್ಲಿ ಹೇಳಿದ್ದರು.
ಬೆಂಗಳೂರಿನಲ್ಲಿರುವ ತಮ್ಮ ಹಾಗೂ ಶಿರಸಿಯಲ್ಲಿರುವ ತಾಯಿ ಜೊತೆ ಜಾತ್ರೆ ಪೇಟೆಗೆ ಹೋಗುವುದಾಗಿ ಅವರು ತಿಳಿಸಿದ್ದರು. ಆದರೆ, ಆತ ಜಾತ್ರೆಗೂ ಬರಲಿಲ್ಲ. ಅದಾದ ನಂತರ ತಂದೆಯ ಸಂಪರ್ಕಕ್ಕೂ ಸಿಗಲಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ಕೃಷ್ಣ ದೇವಾಡಿಗ ಅವರು ಮಾರ್ಚ 6ರಂದು ಕಾರವಾರಕ್ಕೆ ಆಗಮಿಸಿ ಶೋಧ ನಡೆಸಿದರು. ಮಗ ವಾಸವಿದ್ದ ಮನೆ ಬಳಿ ತೆರಳಿದಾಗ ಅದಕ್ಕೆ ಬೀಗ ಹಾಕಿತ್ತು.
ಯಮಹಾ ಶೋರೂಮಿಗೆ ಹೋಗಿ ನೋಡಿದಾಗ ವಿವೇಕ ದೇವಾಡಿಗ ಅವರು ಅಲ್ಲಿಯೂ ಇರಲಿಲ್ಲ. ಅಲ್ಲಿನ ಸಿಬ್ಬಂದಿ ಬಳಿ ವಿಚಾರಿಸಿದಾಗ ಅಲ್ಲಿಯೂ ಕೆಲಸಕ್ಕೆ ಬಾರದಿರುವುದು ಅರಿವಿಗೆ ಬಂದಿತು.
ಹೀಗಾಗಿ ತಂದೆ ಕೃಷ್ಣ ದೇವಾಡಿಗ ಅವರು ಮಗನ ಹುಡುಕಿ ಕೊಡಿ ಎಂದು ಇದೀಗ ಪ್ರಕರಣ ದಾಖಲಿಸಿದ್ದಾರೆ. ಪೋಲಿಸರು ತನಿಖೆ ಕೈಗೊಂಡಿದ್ದಾರೆ.
