Sirsi | ಪತ್ನಿಯೊಂದಿಗೆ ನಡೆದ ಜಗಳದ ಬಳಿಕ ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಎಸಳೆ ಗ್ರಾಮದಲ್ಲಿ ನಡೆದಿದೆ.
ಮೃತರು ಮೂಲತಃ ಕಾನಗೋಡು ಗ್ರಾಮದವರಾಗಿದ್ದು, ಪ್ರಸ್ತುತ ಎಸಳೆ ಗ್ರಾಮದಲ್ಲಿ ವಾಸವಾಗಿದ್ದ ಎಲ್.ಕೆ. ಹೆಗಡೆ (56) ಎಂದು ಗುರುತಿಸಲಾಗಿದೆ. ಅವರು ಅಡಿಕೆ ವ್ಯಾಪಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ರವಿವಾರ ಬೆಳಗ್ಗೆ ದಂಪತಿಗಳ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಬಳಿಕ ಮನನೊಂದ ಎಲ್.ಕೆ. ಹೆಗಡೆ ಅವರು ಮನೆಯ ಬಾತ್‌ರೂಮ್‌ಗೆ ತೆರಳಿ ಬ್ಲೇಡ್‌ನಿಂದ ಕುತ್ತಿಗೆ ಸೀಳಿ ಕೊಂಡು ಗಾಯ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆ ತಿಳಿದ ತಕ್ಷಣ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
