ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನದ ವಿವಾದ ಇದೀಗ ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅಡ್ಡ ಮತದಾನವನ್ನು ಬಿಜೆಪಿ ಕೇಂದ್ರ ನಾಯಕತ್ವ ಸಹ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಬಿಜೆಪಿ‌ ರಾಜ್ಯ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ದೆಹಲಿಗೆ ಸಮನ್ ಮಾಡಿದೆ.

ಈ ನಡುವೆ ಪಕ್ಷಕ್ಕೆ ಅಡ್ಡೇಟು ನೀಡಿ ದ್ರೋಹ ಬಗೆದವರನ್ನು ಪತ್ತೆಹಚ್ಚಲು ಪಕ್ಷದ ಎಲ್ಲಾ 63 ಶಾಸಕರಿಂದಲೂ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮುಂದೆ ಆಣೆ-ಪ್ರಮಾಣ ಮಾಡಿಸಲು ಕಮಲ ಪಕ್ಷ ನಿರ್ಧರಿಸಿದೆ. ಈ ವಾರ ಧರ್ಮಸ್ಥಳದಲ್ಲಿ  ಬಿಜೆಪಿ ಶಾಸಕಾಂಗ ಪಕ್ಷದ ಮಹತ್ವದ ಸಭೆ ಆಯೋಜಿಸಲು ತಿರ್ಮಾನಿಸಲಾಗಿದೆ. ಸಭೆಯ ನಂತರ ಎಲ್ಲ 63 ಶಾಸಕರಿಂದಲೂ ‘ನಾವು ಅಡ್ಡ ಮತದಾನ ಮಾಡಿಲ್ಲ’ ಎಂದು ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಿಸಲಾಗುತ್ತದೆ.

ಸಭೆಗೆ ಯಾರೊಬ್ಬರೂ ಗೈರಾಗದಂತೆ ತಡೆಯಲು ಎಲ್ಲ ಶಾಸಕರಿಗೂ ಅಧಿಕೃತ ‘ವಿಪ್’ ಜಾರಿ ಮಾಡಲು ನಿರ್ಧರಿಸಲಾಗಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಎಲ್ಲ ಶಾಸಕರಿಗೂ ವಿಪ್ ಕೊಡಿಸುವ ಮೂಲಕ ಶಾಸಕಾಂಗ ಪಕ್ಷದ ಸಭೆಗೆ ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಲಿದ್ದಾರೆ.

ಒಟ್ಟಾರೆ,‌ ಅಡ್ಡ ಮತದಾನ ಮಾಡಿ ಬಿಜೆಪಿಗೆ ಅಡ್ಡೇಟು ನೀಡಿದವರು ಯಾರು ಎಂಬುದನ್ನು ‘ಮಂಜುನಾಥ’ ತೋರಿಸಿಕೊಡುತ್ತಾನಾ ಎಂಬುದು ಕಾದು ನೋಡಬೇಕಿದೆ.