Bangalore| ಬೆಂಗಳೂರಿನಲ್ಲಿ ಭಾರಿ ಮಳೆಯಿಂದ ಬೌರಿಂಗ್ ಆಸ್ಪತ್ರೆ ಎಮರ್ಜೆನ್ಸಿ ವಿಭಾಗದ ಬಳಿ ಕಾಂಪೌಂಡ್ ಕುಸಿದು ಭೀಕರ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ 8 ಮಂದಿ ಬೀದಿ ಬದಿ ವ್ಯಾಪಾರಿಗಳು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ ನಗರದಾದ್ಯಂತ ಮಳೆಯಿಂದ ಹಲವು ಅವಾಂತರಗಳು ಸಂಭವಿಸಿವೆ.

ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದರು.
ಇಂದು ಸಂಜೆ ಬೆಂಗಳೂರಿನಲ್ಲಿ ಸುರಿದ ರಣರಕ್ಕಸ ಮಳೆ ಮಕ್ಕಳು ಸೇರಿದಂತೆ ಬರೋಬ್ಬರಿ ಎಂಟು ಜನರನ್ನು ಬಲಿ ಪಡೆದಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ರಸ್ತೆ ಬದಿ ವ್ಯಾಪಾರಿಗಳು ಮತ್ತು ಪಾದಚಾರಿಗಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ. ಅವಶೇಷದಡಿ ಇನ್ನೂ ಜನರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸಂಜೆ 5 ಗಂಟೆಯಿಂದ ಸತತ ಒಂದು ಗಂಟೆ ಕಾಲ ಎಡಬಿಡದೆ ಮಳೆ ಸುರಿದಿದೆ. ಬಿರುಗಾಳಿ, ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಮಳೆ ಜೋರಾಗುತ್ತಿದ್ದಂತೆ ಬೀದಿಬದಿ ವ್ಯಾಪಾರಿಗಳು, ಕಾಂಪೌಂಡ್ ಪಕ್ಕದಲ್ಲಿ ಆಶ್ರಯ ಪಡೆದಿದ್ದಾರೆ. ಮಳೆಯಲ್ಲಿ ಮಕ್ಕಳು ನೆನೀತಾರೆ ಅಂತಾ ಎಲ್ಲರು ಕಾಂಪೌಂಡ್ ಬದಿಗೆ ಓಡಿ ಬಂದಿದ್ದಾರೆ. ಆದರೆ ಬೃಹತ್ ಕಾಂಪೌಂಡ್ ನಲ್ಲೇ ಕಾದು ಕುಳಿತಿದ್ದ ಜವರಾಯ, 8 ಜನರ ಜೀವ ಹೊತ್ತೊಯ್ದಿದ್ದಾನೆ.
ಸದ್ಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಮೂವರು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಿಬ್ಬಂದಿ ಮೃತದೇಹಗಳನ್ನು ಶವಗಾರಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ. ಇತ್ತ ಕುಟುಂಬಕ್ಕೆ ಆಧಾರವಾಗಿದ್ದವರ ಮೃತದೇಹ ಕಂಡು ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಮುಂದೆ ನಮಗೆ ಯಾರು ದಿಕ್ಕು ಎಂದು ರೋಧಿಸುತ್ತಿದ್ದು, ಆಕ್ರಂದನ ಮುಗಿಲುಮುಟ್ಟಿದೆ.
ಸ್ಥಳಕ್ಕೆ ಸಿಎಂ,ಡಿಸಿಎಂ ಭೇಟಿ; ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಿಶೀಲನೆ ಮಾಡಿದರು. ದುರಂತದ ಬಗ್ಗೆ ಸ್ಥಳೀಯರು, ಜಿಬಿಎ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಒತ್ತಡದಿಂದ ಕಾಂಪೌಂಡ್ ಕುಸಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಏಕಾಏಕಿ ಹೇಗೆ ಕುಸಿದು ಬಿತ್ತು ಎಂದು ಅಧಿಕಾರಿಗಳಿಗೆ ಸಿಎಂ ಕ್ಲಾಸ್ ತೆಗೆದುಕೊಂಡರು.
ದುರಂತದ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಡಿಸಿಎಂ, ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಜೊತೆಗೆ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದಾರೆ.
