Haliyal| ಪೋಲಿಸರ ಎದುರೇ ರಂಪಾಟ ನಡೆಸಿ, ಎಸ್ಸೈ ಅಮಾನತ್ತಿಗೂ ಕಾರಣನಾಗಿದ್ದ ರೌಡಿ ಶೀಟರ್ ಮಚ್ಚ್ ಮಂಜ್ ನನ್ನು ಪೋಲಿಸರು ರವಿವಾರ ರಾತ್ರಿ‌ ಸಾಂಗ್ಲಿಯಲ್ಲಿ‌ ಬಂಧಿಸಿದ್ದಾರೆ‌.

ಇತ್ತೀಚೆಗೆ ಹಳಿಯಾಳ ಪಟ್ಟಣದ ಮೌರ್ಯ ಹೋಟೆಲ್‌ ಬಳಿ ರೌಡಿ ಶೀಟರ್ ಮಂಜುನಾಥ ಅಲಿಯಾಸ್ ‘ಮಚ್ಚ್ ಮಂಜ್’ ಪೊಲೀಸರ ಎದುರೇ ಗಲಾಟೆ ನಡೆಸಿದ್ದ. ಈ ವೇಳೆ ಎಸ್ಸೈ ಬಸವರಾಜ ಅವರ ಜೀಪ್‌ ತಡೆದು, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದ. ಘಟನೆಯ ಬಗ್ಗೆ ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಅಲ್ಲದೇ ಘಟನೆ ವೇಳೆ ರೌಡಿ ಶೀಟರ್ ದುಂಡಾವರ್ತನೆ ತೋರುತ್ತಿದ್ದರೂ, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೆ ಅಸಹಾಯಕರಾಗಿ ನಿಂತಿದ್ದರು ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಪೊಲೀಸರ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಈ ಪ್ರಕರಣದಲ್ಲಿ ಪೋಲಿಸ್ ಅಧಿಕಾರಿ‌ ಹಾಗೂ ಸಿಬ್ಬಂದಿಗಳಿಂದ ಕರ್ತವ್ಯ ಲೋಪ ಎಂದು ಪರಿಗಣಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದೀಪನ್ ಎಂ.ಎನ್ ಅವರು ಎಸ್ಸೈ‌ ಬಸವರಾಜ ಅವರನ್ನು ಅಮಾನತ್ತುಗೊಳಿಸಿ‌ದ್ದರು. ಅಲ್ಲದೇ ಎಂಟು ಜನ ಸಿಬ್ಬಂದಿಗಳನ್ನು ಬೇರೆಡೆ ವರ್ಗಾಯಿಸಿ ಆದೇಶಿಸಿದ್ದರು.

ರಂಪಾಟದ ನಡೆಸಿದ ನಂತರ ಮಚ್ಚ್ ಮಂಜ್ ಪಟ್ಟಣದಿಂದ ಪರಾರಿಯಾಗಿದ್ದ. ಆತನ ಪತ್ತೆ ಕಾರ್ಯ ಪೋಲಿಸರು ಮುಂದುವರೆಸಿದ್ದರು. ಕೊನೆಗೂ ಮಚ್ಚ್ ಮಂಜನನ್ನು ನಿನ್ನೆ ರವಿವಾರ ರಾತ್ರಿ ಸಾಂಗ್ಲಿಯಲ್ಲಿ ಪೋಲಿಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧಿಸಿದೆ‌.