Udupi: ಫಾರಿನ್ ಯುವತಿಯ ಮೋಹದ ಜಾಲಕ್ಕೆ ಬಿದ್ದ ಅಂಕಲ್ 1,13,300ರೂ. ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. 

ಉಡುಪಿ ಕುತ್ಪಾಡಿ ನಿವಾಸಿ ಪಾಂಡು ಕರಿಯಪ್ಪಾ ಪೂಜಾರಿ, (62), ಎಂಬವರೇ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಇವರು ಮಂಗಳೂರಿನ ಲೇಡಿ ಹಿಲ್ ನಲ್ಲಿ ಅಡುಗೆ ತಯಾರಕರಾಗಿ ಕೆಲಸ ಮಾಡಿಕೊಂಡಿದ್ದಾರೆ‌. ಇವರಿಗೆ ವಾಟ್ಸಪ್‌ ಮೂಲಕ ಏಮಿಲ್ಡಾ ವಿಲಿಯಮ್‌ ಎಂಬಾಕೆಯ ಪರಿಚಯವಾಗಿದ್ದು, ತಾನು ಲಂಡನ್‌ ನಿವಾಸಿ ಎಂದು ತಿಳಿಸಿದ್ದಳು. ಇಬ್ಬರೂ ಪರಸ್ಪರ ಚ್ಯಾಟಿಂಗ್ ಮಾಡ್ತಿದ್ದದ್ದರಿಂದ ಅಂಕಲ್ ಅಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದರು. 

ಏಮಿಲ್ಡಾ ವಿಲಿಯಂ ಎಂಬ ಮಹಿಳೆ ತಾನು ಭಾರತದಲ್ಲಿ ಕಾಸ್ಮೆಟಿಕ್‌ ಹಾಗೂ ಹೋಟೆಲ್‌ ವ್ಯವಹಾರ ಮಾಡುತ್ತೇನೆ. ಪಾಂಡು ಅವರನ್ನು ಭೇಟಿಯಾಗಲು ಮಂಗಳೂರಿಗೆ ಬರುತ್ತೇನೆ ಎಂದು ಮೆಸೇಜ್ ಹಾಕಿದ್ದಳು. ಏಮಿಲ್ಡಾಳ ಕನಸಿನಲ್ಲೇ ಇದ್ದ ಪಾಂಡುಗೆ ಆಕೆ ಯಾಮಾರಿಸುವ ಚಾಲಾಕಿ ಹೆಣ್ಣು ಅಂತಾ ಗೊತ್ತೇ ಆಗಲಿಲ್ಲ.‌

ಎ. 7ರಂದು ಏಮಿಲ್ಡಾ ವಿಲಿಯಂ ವಾಟ್ಸಪ್ ಮೂಲಕ ತಾನು ಲಂಡನ್‌ ನಿಂದ ದೆಹಲಿಗೆ ಬರುವ ವಿಮಾನದ ಟಿಕೆಟ್‌ ಅನ್ನು ಕಳುಹಿಸಿದ್ದಳು. ಆದರೆ, ಎ.8ರಂದು ಬೆಳಿಗ್ಗೆ 10ಕ್ಕೆ ಪಾಂಡು ಮನೆಯಲ್ಲಿರುವಾಗ ಅವರ ಮೊಬೈಲ್‌ ಗೆ ಓರ್ವ ಅಪರಿಚಿತ ಮಹಿಳೆ ಕರೆ ಮಾಡಿದ್ದಳು. ನಿಮ್ಮ ಸ್ನೇಹಿತೆ ಏಮಿಲ್ಡಾ ವಿಲಿಯಂ ದೆಹಲಿ ವಿಮಾನ ನಿಲ್ದಾಣದಲ್ಲಿ 5 ಕೋಟಿ ರೂ. ಮೌಲ್ಯದ ಡಿಮಾಂಡ್‌ ಡ್ರಾಫ್ಟ್‌ ಹಾಗೂ ಅಧಿಕ ವಸ್ತುಗಳನ್ನು ಹೊಂದಿದ್ದಾಳೆ. ಈ ಹಿನ್ನೆಲೆ ನೀವು ಕೂಡಲೇ 70,000ರೂ. ಹಣವನ್ನು ಕಟ್ಟುವಂತೆ ಹೇಳಿದ್ದಳು. ಬಳಿಕ ಏಮಿಲ್ಡಾ ವಿಲಿಯಂ ಚಾಲಾಕಿಯಿಂದ ಪಾಂಡು ಬಳಿ ಅಳುತ್ತಾ ಮಾತನಾಡಿದ್ದಳು. ಇದರಿಂದ ಸಂಪೂರ್ಣ ಇಮೋಶನಲ್ (emotional) ಆದ ಪಾಂಡು ಕೂಡಲೇ ತನ್ನ ಖಾತೆಯಿಂದ ಸ್ಕ್ಯಾನರ್‌ ಗೆ 69,400ರೂ. ಹಣ ಕಳುಹಿಸಿದ್ದರು.

ಬಳಿಕ ಮತ್ತೆ 40,000ರೂ. ಕಳುಹಿಸುವಂತೆ ತಿಳಿಸಿದಾಗ ಪಾಂಡು ಮತ್ತೆ 20,000 ರೂ. ಅನ್ನು ಸ್ಕ್ಯಾನರ್‌ ಮುಖಾಂತರ ಕಳುಹಿಸಿದ್ದರು. ಅಲ್ಲದೇ, ಪಾಂಡು ಅವರ ಸಂಬಂಧಿ ನಮಿತ್‌ ಎಂಬವರ ಖಾತೆಯ ಮೂಲಕ 18,400ರೂ‌. ಕಳುಹಿಸಿದ್ದರು. ಈ ಮೂಲಕ ಒಟ್ಟು 1,13,300ರೂ. ಕಳುಹಿಸಿದ ಬಳಿಕ ಏಮಿಲ್ಡಾ ಕಾಣೆಯಾಗಿದ್ದಾಳೆ. ಈ ಘಟನೆಯ ಬಳಿಕ ಪಾಂಡು ಅವರಿಗೆ ತಾನು ಮೋಸ ಹೋಗಿರುವುದಾಗಿ ತಿಳಿದುಬಂದಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ದೂರು ನೀಡಿದ್ದಾರೆ‌. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪಾಂಡುಗೆ ಮಂಕುಬೂದಿ ಎರಚಿದ ಏಮಿಲ್ಡಾ ಹಾಗೂ ತಂಡದ ಶೋಧ ಕಾರ್ಯಾಚರಣೆಗೆ ಇಳಿದಿದ್ದಾರೆ.