Haveri|ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಆಂತರಿಕ ವೈಮನಸ್ಸು ಮುಂದುವರಿದಿದ್ದು, ಇದಕ್ಕೆ ಸಾಕ್ಷಿಯಾಗಿದ್ದು ಹಾವೇರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶ.

ಕಾಂಗ್ರೆಸ್ ಸಮಾವೇಶದ ವೇದಿಕೆಯಲ್ಲಿ ಸಿಎಂ ಹಾಗೂ ಡಿಸಿಎಂ ಪಕ್ಕಪಕ್ಕದಲ್ಲೇ ಕುಳಿತಿದ್ರೂ ಸಾಕಷ್ಟು ಸಮಯ ಒಬ್ಬರಿಗೊಬ್ಬರು ಮಾತನಾಡದೇ, ಮುಖವೂ ನೋಡಿಲ್ಲ‌. ಸಿಎಂ ಸಿದ್ಧರಾಮಯ್ಯ ಪೇಪರ್ ನೋಡೋಕೆ ಪ್ರಾರಂಭಿಸಿದ್ರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಕಂದಾಯ ಇಲಾಖೆಯ ಡಾಕ್ಯೂಮೆಂಟ್ ನೋಡಲಾರಂಭಿಸಿದರು. ಸುಮಾರು ಹೊತ್ತಿನ ಬಳಿಕ ಡಿಕೆಶಿ, ಸಿದ್ಧರಾಮಯ್ಯರನ್ನು ಮಾತನಾಡಿಸಿದ್ದು, ಸಿಎಂ ಕೂಡಾ ಸಣ್ಣದಾಗಿ ಪ್ರತಿಕ್ರಿಯಿಸಿ ಸುಮ್ಮನಾಗಿದ್ದಾರೆ.

ಕಾರ್ಯಕ್ರಮ ಪೂರ್ತಿ ಇಬ್ಬರ ನಡುವೆ ಮಾತಿಗಿಂತ ಮೌನವೇ ಜಾಸ್ತಿಯಾಗಿದ್ದು, ಆಗಾಗ ಒಬ್ಬರ ಮುಖವನ್ನು ಇನ್ನೊಬ್ಬರು ನೋಡ್ತಾ ಅಷ್ಟಕ್ಕಷ್ಟೇ ಮಾತನಾಡಿ ಬಳಿಕ ಪೂರ್ಣ ಸೈಲೆಂಟಾಗಿದ್ದಾರೆ.

ಸಿಎಂ ಹಾಗೂ ಡಿಸಿಎಂ ಅವರ ಈ ಆಂತರಿಕ ವೈಮನಸ್ಸು ಮತ್ತೆ ಕಾಂಗ್ರೆಸ್ ಕಾರ್ಯಕರ್ತರ ಮುಂದೆಯೇ ಬಹಿರಂಗಗೊಂಡಿದೆ. ಅಧಿಕಾರ ಹಂಚಿಕೆಯ ಪ್ರಾಮಿಸ್ ಜತೆ ಸಿಎಂ ಹಾಗೂ ಡಿಸಿಎಂ ರಾಜ್ಯದ ಅಧಿಕಾರದ ಚುಕಾಣಿ ಹಿಡಿದಿದ್ದರು. ಆದ್ರೆ, ಸಿಎಂ ಸಿದ್ಧರಾಮಯ್ಯ ಸೀಟಿನಲ್ಲಿ ಕೂರುವ ಅವಧಿ ಮುಗಿದ ನಂತರವೂ ತನಗೆ ಸೀಟು ಬಿಟ್ಟುಕೊಡದ್ದನ್ನು ಕಂಡು ಡಿಕೆಶಿ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ, ಕಾಂಗ್ರೆಸ್ ಹೈಕಮಾಂಡನ್ನು ಕೂಡಾ ಹಲವು ಬಾರಿ ಭೇಟಿಯಾಗಿ ಮನದ ಇಂಗಿತ ವ್ಯಕ್ತಪಡಿಸಿ, ಆಶ್ವಾಸನೆ ಕೂಡಾ ಪಡೆದುಕೊಂಡು ಬಂದಿದ್ದರು.

ಆದರೆ, ಸಿಎಂ ಸಿದ್ಧರಾಮಯ್ಯ ಮಾತ್ರ ಸೀಟು ಬಿಟ್ಟು ಕದಲದ್ದು ನೋಡಿ ಶಾಸಕರನ್ನು ಒಟ್ಟುಗೂಡಿಸಲು ಯತ್ನಿಸಿದ್ದರು. ಆದರೆ, ಜಮೀರ್, ಸತೀಶ್ ಜಾರಕಿಹೊಳಿ ಮುಂತಾದವರು ಯಾವುದೇ ಕಾರಣಕ್ಕೂ ಸಿಎಂ ಸಿದ್ಧರಾಮಯ್ಯ ಸೀಟು ಬಿಟ್ಟು ಕೊಡಬಾರದು ಅಂತಾ ಪಟ್ಟುಹಿಡಿದಿದ್ದಾರೆ. ಮನುಷ್ಯರ ನೆಲೆಯಲ್ಲಿ ಆಗಲ್ಲ, ಇನ್ನೇನಿದ್ರೂ ದೈವಿಕ ನೆಲೆಯಲ್ಲಿ ಪ್ರಯತ್ನ ಪಡುವ ಉದ್ದೇಶದಿಂದ ಕೇರಳದಲ್ಲಿ ಮಹಾಕಾಳಿ, ಪ್ರತ್ಯಂಗಿರಾ ದೇವಿ, ಕಾಲಭೈರವನಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದ್ದರು. ಅಷ್ಟೇ, ಅಲ್ಲದೇ, ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಆಂದ್ಲೆಯ ಶ್ರೀಜಗದೀಶ್ವರಿ ದೇವಸ್ಥಾನಕ್ಕೂ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ, ದೇವಿ ಮುಂದೆ ತನ್ನ ಮನದ ಇಂಗಿತ ವ್ಯಕ್ತಪಡಿಸಿದಾಗ ಶುಭ ಸೂಚನೆ ದೊರಕಿತ್ತು.

ಇನ್ನೇನು ತನ್ನ ಮನಸ್ಸಿನ ಆಸೆಯಂತೆ ಸಿಎಂ ಸೀಟು ದೊರಕುತ್ತದೆ ಅನ್ನೋವಾಗ ಸಿದ್ಧರಾಮಯ್ಯ ತನ್ನ ದಾಳವನ್ನು ಉರುಳಿಸಿ ಮತ್ತೆ ಮತ್ತೆ ತಡೆಗೋಡೆ ತಂದಿಡುತ್ತಿದ್ದಾರೆ. ಇದು ಸಹಜವಾಗಿ ಡಿಕೆಶಿ ಮನಸ್ಸಿನಲ್ಲಿ ಬೆಂಕಿಯನ್ನು ಉರಿಸುತ್ತಿದ್ರೂ “ಅಪ್ನಾ ಟೈಮ್ ಆಯೇಗಾ” ಅಂತಾ ಮತ್ತೆ ಚಾತಕ ಪಕ್ಷಿಯಂತೆ ಸಿಎಂ ಸೀಟಿಗಾಗಿ ಡಿಕೆಶಿ ಕಾಯುವಂತೆ ಮಾಡಿದೆ.

ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಎದುರಲ್ಲಿ ಸಿಎಂ ಹಾಗೂ ಡಿಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯ, ತಗಾದೆಗಳಲ್ಲ ಅಂತಾ ತೋರಿಸಿಕೊಂಡ್ರೂ ಸೀಟು ವಿಚಾರದ ವೈಮನಸ್ಸು ಇಬ್ಬರ ನಡುವೆ ಆಗಾಗ ಕಾಣಿಸುತ್ತಲೇ ಇರುತ್ತವೆ ಅನ್ನೋದರಲ್ಲಿ ಎರಡು ಮಾತಿಲ್ಲ.