Karwar| ಹೊನ್ನಾವರದಲ್ಲಿ ಮೊನ್ನೆ ನಡೆದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ನಡೆದ ಪ್ರತಿಭಟನಾ ಜನ ಸಮಾವೇಶದಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ ಇಬ್ಬರ ನಡುವೆ ನಡೆದ ಮಾತಿನ ವಾಗ್ವಾದ, ಇದೀಗ ಕೊಬ್ಬರಿ ಎಣ್ಣೆ ಹಂತಕ್ಕೆ ತಲುಪಿದೆ.
ಕರಾವಳಿ ಉತ್ಸವದ ವೇಳೆ ಕಾರವಾರಕ್ಕೆ ಆಗಮಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ, ಶರಾವತಿ ಪಂಪ್ಡ್ ಸ್ಟೋರೇಜ್ ಶತಾಯುಗತಾಯ ಮಾಡಿಯೇ ತಿರುತ್ತೇನೆ ಎಂದು ಉಸ್ತುವಾರಿ ಸಚಿವ ವೈದ್ಯ ಪಕ್ಕದಲ್ಲಿಯೇ ಇರುವಾಗಲೇ ಹೇಳಿದ್ದರು. ಆಗ ಸಚಿವ ವೈದ್ಯ ಏನೂ ಮಾತನಾಡದೇ, ಮೌನವಾಗಿದ್ದರು ಎಂದು ಮೊನ್ನೆ ಹೊನ್ನಾವರದಲ್ಲಿ ನಡೆದ ಸಭೆಯಲ್ಲಿ ಮಾಸ್ತಪ್ಪ ನಾಯ್ಕ ಹೇಳಿದ್ದರು. ಇದಕ್ಕೆ ಸಚಿವ ವೈದ್ಯರು ಡಿಕೆಶಿ ಆ ರೀತಿ ಹೇಳಲೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದರು.
ಆದರೆ, ಇದಕ್ಕೆ ಕಾರವಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದ ಮಾಸ್ತಪ್ಪ ನಾಯ್ಕ, ಗುರುವಾರ ಭಟ್ಕಳದಲ್ಲಿ ಕಾಂಗ್ರೆಸ್ ನ ಅವರದೇ ಪಕ್ಷದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಡಿಕೆಶಿ ಕಾರವಾರದಲ್ಲಿ ಪಂಪ್ಡ್ ಸ್ಟೋರೆಜ್ ಬಗ್ಗೆ ಹೇಳಿದ್ದರು ಎಂದು ಒಪ್ಪಿಕೊಂಡಿದ್ದಾರೆ.
ಆದರೆ, ಉಸ್ತುವಾರಿ ಸಚಿವ ಮಂಕಾಳ ವೈದ್ಯ ದಗಲಬಾಜಿ ರಾಜಕಾರಣ ಮಾಡುತ್ತಿದ್ದು, ಸುಳ್ಳೇ ಅವರ ಮನೆ ದೇವರಾಗಿದೆ. ಕಿವಿ ಇದ್ರೂ ಕಿವುಡರಾಗಿರುವ ಸಚಿವರಿಗೆ ತಾನು ಉಚಿತ ಕೊಬ್ಬರಿ ಎಣ್ಣೆ ಕೊಡ್ತೆನೆ. ಇದನ್ನು ಹಾಕಿಕೊಂಡು ಅವರು ತಮ್ಮ ಕಿವಿ ದೋಷ ಸರಿ ಮಾಡಿಕೊಳ್ಳಲಿ ಎಂದು ಸುಮಾರು ಅರ್ಧ ಕೆಜಿಯ ಪ್ಯಾರಚೂಟ್ ಕೊಬ್ಬರಿ ಎಣ್ಣೆ ಬಾಟಲಿ ತೊರಿಸಿ ತಿರುಗೇಟು ನೀಡಿದ್ದರು
ಒಟ್ಟಾರೆ, ಈ ಪ್ಯಾರಾಚೂಟ್ ಕೊಬ್ಬರಿ ಎಣ್ಣೆ ಭಟ್ಕಳ ರಾಜಕಾರಣದಲ್ಲಿ ಯಾವ್ಯಾವ ರಾಜಕಾರಣಿಯ ರಾಜಕೀಯ ಜೀವನಕ್ಕೆ ಅನುಕೂಲ, ಅನಾನುಕೂಲ ಮಾಡಲಿದೆ. ಯಾರು ಯಾರಿಗೆ ಕೊಬ್ಬರಿ ಎಣ್ಣೆ ಹಚ್ಚುತ್ತಾರೆ ಎಂಬುದನ್ನು ಮುಂದಿನ ಚುನಾವಣೆವರೆಗೆ ಭಟ್ಕಳಿಗರೇ ಕಾದು ನೋಡಬೇಕಾಗಿದೆ.
