Karwar|ಕಾರವಾರ–ಅಂಕೋಲಾ ಕ್ಷೇತ್ರದ ರಾಜಕೀಯದಲ್ಲಿ ಆಗಾಗ ಚರ್ಚೆಗೆ ಗ್ರಾಸವಾಗುವ ಹೆಸರು ಮಾಜಿ ಸಚಿವ ಆನಂದ ಅಸ್ನೋಟಿಕರ್. ಸದ್ಯ ಅವರು ಜೆಡಿಎಸ್ ನಲ್ಲಿದ್ದರೂ, ಅವರ ಮುಂದಿನ ರಾಜಕೀಯ ಹೆಜ್ಜೆ ಯಾವ ದಿಕ್ಕಿಗೆ ಸಾಗಲಿದೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಷ್ಟೇ ಅಲ್ಲ, ಸಾರ್ವಜನಿಕರಲ್ಲಿಯೂ ಕುತೂಹಲ ಇದೆ.

ಜಿಲ್ಲೆಯ ‘ಕನ್ಫ್ಯೂಸ್ಡ್‌ ರಾಜಕಾರಣಿ’ (Confused Politician) ಎಂಬ ಟೀಕೆ ಸಹ ಅವರ ವಿರುದ್ಧ ಕೇಳಿಬರುತ್ತಿದೆ. ಜೆಡಿಎಸ್‌ನಲ್ಲಿ ಇದ್ದರೂ ಸಂಘಟನೆ ಅಥವಾ ಪಕ್ಷ ಚಟುವಟಿಕೆಗಳಲ್ಲಿ ಅವರು ಹೆಚ್ಚು ಸಕ್ರಿಯರಾಗಿಲ್ಲ. ಜೆಡಿಎಸ್ ನಲ್ಲೇ ಮುಂದುವರಿಯುವ ರಾಜಕೀಯ ಸ್ಪಷ್ಟತೆ ಸಹ ಕಾಣುತ್ತಿಲ್ಲ ಎನ್ನಲಾಗುತ್ತಿದ್ದು, ಇನ್ನೊಂದೆಡೆ ಕಾಂಗ್ರೆಸ್ ಅಥವಾ ಬಿಜೆಪಿ ಸೇರ್ಪಡೆಯೂ ಸಹ ಕೈಗೆಟುಕದ ದ್ರಾಕ್ಷಿಯಂತಾಗಿದೆ.

ಬಿಜೆಪಿ ಪ್ರವೇಶಕ್ಕೆ ಅಸ್ನೋಟಿಕರ್ ಹಲವು ಬಾರಿ ಪ್ರಯತ್ನಿಸಿದರೂ ಯಶಸ್ಸು ಕಾಣಲಿಲ್ಲ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ವಿಶೇಷವಾಗಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರ ವಿರೋಧ ಪ್ರಮುಖ ಅಡೆತಡೆಯಾಗಿದೆ ಎನ್ನಲಾಗುತ್ತಿದೆ. ಪಕ್ಷದಲ್ಲಿನ ಕೆಲ ರೂಪಾಲಿ ನಾಯ್ಕ ರ ಹಿತ ಶತ್ರುಗಳು ಅಸ್ನೋಟಿಕರ್ ಪ್ರವೇಶದಿಂದ ಬಿಜೆಪಿ ಬಲ ಹೆಚ್ಚುತ್ತದೆ ಎಂದು ಅವರ ಪರ ಬ್ಯಾಟಿಂಗ್ ಮಾಡಿದರೂ ಸಹ, ತನ್ನ ಬೆಂಗಳೂರು ಮಟ್ಟದ ಉನ್ನತ ರಾಜಕೀಯ ಸಂಪರ್ಕವನ್ನು ಬಳಸಿ ಆನಂದ ಅಸ್ನೋಟಿಕರ್ ಬಿಜೆಪಿ ಪ್ರವೇಶವನ್ನು ಶತಾಯು ಗತಾಯು ತಡೆ ಹಿಡಿದಿದ್ದಾರೆ.

ಸ್ಥಳೀಯ ಹಾಗೂ ರಾಜ್ಯ ರಾಜಕಾರಣದಲ್ಲಿ ತನ್ನದೇ ಪ್ರಭಾವವನ್ನು ನಿರ್ಮಿಸಿಕೊಂಡಿರುವ ರೂಪಾಲಿ ನಾಯ್ಕ, ರಾಜಕಾರಣದ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಅಂಥ ಗಟ್ಟಿಗಿತ್ತಿಯ ವಿರುದ್ಧ ಸೆಣಸಾಡಿ ಬಿಜೆಪಿ ಪ್ರವೇಶ ಮಾಡುವುದು ಸುಲಭವಲ್ಲ ಎಂಬುದು ಅಸ್ನೋಟಿಕರ್ ಗೂ ಸಹ ತಿಳಿದಿದೆ‌. ಇನ್ನು ಕಾಂಗ್ರೆಸ್‌ ಪ್ರವೇಶಕ್ಕೆ ಶಾಸಕ ಸತೀಶ ಸೈಲ್‌ ಬಂಡೆಗಲ್ಲಿನಂತೆ ಅಡ್ಡಿಯಾಗಿ ನಿಂತಿದ್ದಾರೆ. ಹೀಗಾಗಿ ಆನಂದ ತೋಳಲಾಟದಲ್ಲಿದ್ದಾರೆ ಎನ್ನಲಾಗಿದೆ.

ತಂದೆ ವಸಂತ ಅಸ್ನೋಟಿಕರ್‌ ಹೆಸರಿನ ಮೇಲೆ ರಾಜಕೀಯ ಮಾಡಿ, ಕಿರಿಯ ವಯಸ್ಸಿನಲ್ಲಿಯೇ ಶಾಸಕ, ಸಚಿವರಾಗಿ ಮೆರೆದ ಆನಂದ ತಮ್ಮ ರಾಜಕೀಯ ತಪ್ಪು ನಿರ್ಧಾರಗಳಿಂದ ಆನಂದ ಈಗ ಅತಂತ್ರರಾಗಿದ್ದಾರೆ. ಮಾಜಿ ಶಾಸಕ ದಿ. ವಸಂತ ಅಸ್ನೋಟಿಕರ್ ಅವರ ರಾಜಕೀಯ ಖದರ್‍ರೆ ಬೇರೆ. ಸದಾ ಬೆಂಬಲಿಗರು ಹಾಗೂ ಕಾರ್ಯಕರ್ತರ ನಡುವೆ ಇರುತ್ತಿದ್ದ ಅವರು, ಕಾರ್ಯಕರ್ತರನ್ನು ಬೆಂಬಲಿಗರನ್ನು ಯಾವ ಕಾರಣಕ್ಕೂ ಬಿಟ್ಟುಕೊಡುತ್ತಿರಲಿಲ್ಲ. ಅವರನ್ನ ಬೆಳೆಸುವ ಕೆಲಸ ಸಹ ಮಾಡುತ್ತಿದ್ದರು. ಅದೇ ಅವರ ಶಕ್ತಿಯೂ ಆಗಿತ್ತು. ಅವರ ನಂತರ ತಾಯಿ ದಿ.ಶುಭಲತಾ ಅಸ್ನೋಟಿಕರ್‌ ಸಹ ಅದನ್ನು ಮುಂದುವರೆಸಿದ್ದರು. ಹೀಗಾಗಿ ಸದಾ ಅವರ ಸುತ್ತ ಕಾರ್ಯಕರ್ತರ ಪಡೆಯೇ ನಿಲ್ಲುತ್ತಿತ್ತು.

ಆದರೆ ಚಿಕ್ಕ ವಯಸ್ಸಿನಲ್ಲಿಯೇ ಕಾಂಗ್ರೆಸ್ ನಿಂದ ಶಾಸಕನಾಗಿ ನಂತರ ಆಪರೇಶನ್‌ ಕಮಲಕ್ಕೆ ಒಳಗಾಗಿ ಸಚಿವನಾಗಿ ಹೀಗೆ `ಜಂಪಿಂಗ್‌ ಸ್ಟಾರ್‌’ ಎಂಬ ಖ್ಯಾತಿ ಪಡೆದ ಆನಂದ, ವಿಧಾನಸಭೆ, ಲೋಕಸಭೆ ಚುನಾವಣೆಯ ಸರಣಿ ಸೋಲಿನ ನಂತರ ಕಾರ್ಯಕರ್ತರಿಂದಲೂ ಸಹ ದೂರವಾದರು. ಅವರ ಬಹುತೇಕ ಬೆಂಬಲಿಗರು, ಕಾರ್ಯಕರ್ತರು ಕಮಲ ಮುಡಿದರೇ, ಇನ್ನು ಕೆಲವರು ಕಾಂಗ್ರೇಸ್‌ ಪಾಲಾದರು. ಅಳಿದುಳಿದ ಕೆಲ ಕಾರ್ಯಕರ್ತರು ಮಾತ್ರ ನಮ್ಮ ಸಾಹುಕಾರ್‍ರು `ಟಾಕ್ಸಿಕ್‌ ಫಿಲ್ಮ್‌ನ ಎಂಟ್ರಿ ಸೀನ್‌ ನಲ್ಲಿ ಯಶ್‌ ಕಾರಿನಿಂದ ಇಳಿದು ಬರುವಂತೆ ರಾಜಕೀಯಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡ್ತಾರೆ ನೋಡ್ತಾ ಇರ್‍ರಿ’ (ಅಮ್ಗೆಲೆ ಸಾವಕಾರ್‌ ಟಾಕ್ಸಿಕ್‌ ಫೀಲ್ಮಾ ಬಿತರ್‌ ಯಶ್‌ ಟೈಪ್‌ತ್ ಪಾಲಿಟಿಕ್ಸಾಕ್‌ ರಿ ಎಂಟ್ರಿ ಮಾರ್‍ತಾ ಪಳೇ) ಎಂದು ಹೇಳುತ್ತಾ ಆನಂದ ರಾಜಕೀಯದ ಬಗ್ಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಒಟ್ಟಾರೇ ಒಮ್ಮೆ ಕೇಸರಿ ಶಾಲು ಹಾಕಿ ಅಪ್ಪಟ ಹಿಂದು ಹೃದಯ್‌ ಸಾಮ್ರಾಟ್‌ನಾಗಿ, ಇನ್ನೊಮ್ಮೆ ಹಸಿರು ಶಾಲು ಹಾಕಿ ಜೆಡಿಎಸ್‌ನ ಕಟ್ಟಾಳುವಿನಂತೆ ನಂತರ ಇವೆರಡೂ ಶಾಲನ್ನು ಪಕ್ಕಕ್ಕಿಟ್ಟು ಕಾಂಗ್ರೆಸ್‌ ಸೇರ್ಪಡೆಗೆ ಆ ಪಕ್ಷದ ನಾಯಕರ ಭೇಟಿಗೆ ತೆರಳುವ ಆನಂದ ಅಸ್ನೋಟಿಕರ್‌ ಅವರ ರಾಜಕೀಯ ನಡೆಯ ಬಗ್ಗೆ ಜನ ಕೇಳುತ್ತಿರುವುದು ಒಂದೇ ಮಾತು `ದಾರಿ ಯಾವುದಯ್ಯ…..’