ಕಾರವಾರ: ಸೀಬರ್ಡ್ ನೌಕಾನಲೆ ಯೋಜನೆಗೆ ಭೂ ಸ್ವಾದೀನಪಡಿಸಿಕೊಂಡ 112 ಪ್ರಕರಣಗಳಿಗೆ ಒಟ್ಟು ₹27.70 ಕೋಟಿಗಳ ಹೆಚ್ಚುವರಿ ಪರಿಹಾರವನ್ನು ಬಿಡುಗಡೆಗೊಳಿಸಿದ್ದು, ಇವುಗಳಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸಿದ 35 ಪ್ರಕರಣಗಳಲ್ಲಿನ ಫಲಾನುಭವಿಗಳಿಗೆ ₹6.87 ಕೋಟಿ ಪರಿಹಾರವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು.

ನಂತರ ಮಾತನಾಡಿದ ಅವರು ಸೀಬರ್ಡ್ ನೌಕಾನಲೆ ಯೋಜನೆಗೆ ಭೂ ಸ್ವಾದೀನಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ಪರಿಹಾರದ ಮೊತ್ತವನ್ನು ಪಾವತಿಗೆ ಇರುವ ಸಮಸ್ಯೆಗಳ ಕುರಿತು ಕೇಂದ್ರ ರಕ್ಷಣಾ ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದು, ಅದರಂತೆ ಇದಕ್ಕಾಗಿ ವಿಶೇಷ ಅಧಿಕಾರಿಯನ್ನು ಸಚಿವರು ನೇಮಕ ಮಾಡಿದ ನಂತರ ಪರಿಹರದ ಮೊತ್ತ ಬಿಡುಗಡೆ ಕಾರ್ಯ ಶೀಘ್ರಗೊಂಡಿದ್ದು, ಇದುವರೆಗೆ ರೂ.35 ಕೋಟಿ ಬಿಡುಗಡೆಗೊಂಡಿದೆ. ಬಾಕಿ ಉಳಿದಿರುವ 215 ಪ್ರಕರಣಗಳಿಗೆ ಬಿಡುಗಡೆಯಗಬೇಕಾದ ರೂ.28.82 ಕೋಟಿ ಮೊತ್ತ ಕೂಡಾ ತ್ವರಿತಗತಿಯಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಮಾತನಾಡಿ, ಸಂತ್ರಸ್ಥರಿಗೆ ಪರಿಹಾರ ಪಾವತಿ ಕುರಿತಂತೆ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯಲ್ಲಿ ದಾಖಲಾದ ಪ್ರಕರಣಗಳಿಗೆ ಹೆಚ್ಚುವರಿ ಪರಿಹಾರ ವಿತರಿಸಲಾಗುತ್ತಿದ್ದು, ಇದುವರೆಗೆ ಒಟ್ಟು 647.58 ಕೋಟಿ ಪರಿಹಾರ ಡಿಫೆನ್ಸ್ ಎಸ್ಟೇಟ್ ಆಫೀಸರ್ ಬೆಂಗಳೂರು ಅವರಿಂದ ಬಿಡುಗಡೆಯಾಗಿದೆ ಎಂದರು.

ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ, ಜಿ.ಪಂ. ಸಿಇಓ ಡಾ.ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಸಹಾಯಕ ಆಯುಕ್ತ ಶ್ರವಣ ಕುಮಾರ್, ತರಬೇತಿ ನಿರತ ಐ.ಎ.ಎಸ್. ಅಧಿಕಾರಿ ಝೂಪಿಶಾನ್ ಹಕ್ ಉಪಸ್ಥಿತರಿದ್ದರು.

ಭೂ ಸ್ವಾದೀನ ಸಂತ್ರಸ್ಥರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಆನ್ ಲೈನ್ ಮೂಲಕ ಪರಿಹಾರದ ಮೊತ್ತವನ್ನು ಜಮೆ ಮಾಡಲಾಯಿತು.