Gadag| 5 ಲಕ್ಷ ರೂ. ಲಂಚ ಸ್ವೀಕಾರ ಮಾಡುವಾಗ ಗದಗ ಜಿಲ್ಲೆಯ ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಡಾ. ಚಂದ್ರು ಮಾಲಕತ್ವದ ಬಾಲಾಜಿ ಆಸ್ಪತ್ರೆಗೆ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ಗುತ್ತಿಗೆದಾರ ವಿಜಯ ಪೂಜಾರ ಎಂಬಾತನ ಕೈಯಿಂದ 5 ಲಕ್ಷ ರೂ. ಪಡೆಯುವಾಗ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಈ ವೇಳೆ ಶಾಸಕ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ರಸ್ತೆ ಕಾಮಗಾರಿ ಸಂಬಂಧಿಸಿ 11ಲಕ್ಷ ರೂ. ಡೀಲ್ ಮಾಡಲಾಗಿದ್ದು, ಇದರಲ್ಲಿ ಒಂದು ಕಂತು 5 ಲಕ್ಷ ರೂ. ಪಡೆಯುತ್ತಿದ್ದಂತೇ ಖೆಡ್ಡಾಕ್ಕೆ ಬಿದ್ದಿದ್ದಾರೆ. ಇನ್ನು ಶಾಸಕ ಡಾ. ಚಂದ್ರು ಅವರನ್ನು ಲೋಕಾಯುಕ್ತ ವಿಚಾರಣೆ ನಡೆಸುತ್ತಿದ್ದಂತೇ ಶಾಸಕರ ಅಭಿಮಾನಿಗಳು ಹೈಡ್ರಾಮಾ ಮಾಡಲಾರಂಭಿಸಿದ್ದಾರೆ.
‘ಬಂಜಾರಾ ಸಮುದಾಯದ ಶಾಸಕರನ್ನು ಟಾರ್ಗೆಟ್ ಮಾಡಿ ತುಳಿಯುವ ಹುನ್ನಾರ’ ಮಾಡಲಾಗುತ್ತಿದೆ ಎಂದು ಲಕ್ಷ್ಮೇಶ್ವರ ಮಹಾಕವಿ ಪಂಪ ಸರ್ಕಲ್ ಬಳಿಯ ಬಾಲಾಜಿ ಆಸ್ಪತ್ರೆಯ ಕಚೇರಿ ಮುಂದೆ ಡ್ರಾಮಾ ನಡೆಸಿದ್ದಾರೆ. ಅಲ್ಲದೇ,
ಲೋಕಾಯುಕ್ತ ವಿಚಾರಣೆ ವೇಳೆ ಕಚೇರಿ ಹೊರಗಡೆ ಬಿಜೆಪಿ ಕಾರ್ಯಕರ್ತರು ಕೂಗಾಟ, ಚೀರಾಟ ಮಾಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸಚಿವರು, ಶಾಸಕರು ಸೇರಿ ಡಾ. ಚಂದ್ರು ಲಮಾಣಿಯವರನ್ನ ಟ್ರ್ಯಾಪ್ ಮಾಡಿಸಿದ್ದಾರೆ ಎಂದು
ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಕಾರ್ಯಕರ್ತ ಬಸು ಚಕ್ರಸಾಲಿ ಎಂಬಾತ ಹೆಚ್ಚಿನ ಡ್ರಾಮಾ ಮಾಡಿದ್ದು, ಪೊಲೀಸರನ್ನು ನೂಕಿ ಕಾರ್ಯಕರ್ತರ ತಂಡದೊಂದಿಗೆ ಕಚೇರಿಯೊಳಗೆ ನುಗ್ಗಲು ಯತ್ನಿಸಿದ್ದ. ಈ ವೇಳೆ ಪೊಲೀಸರು, ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದ್ದು, ಶಾಸಕ ಕಚೇರಿ ಎದುರು ಕೆಲವು ಕಾಲ ಹೈಡ್ರಾಮಾ ನಿರ್ಮಾಣವಾಗಿತ್ತು.
ಈ ಪ್ರಕರಣ ಸಂಬಂಧಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಜನಪ್ರತಿನಿಧಿಗಳಾದವರು ಬಹಳ ಕ್ವಾಶಿಯಸ್ ಆಗಿರಬೇಕು. ಜನರಿಗೆ ಆದರ್ಶವಾಗಿರಬೇಕು. ಜನರ ಕೆಲಸ ಮಾಡಲು ಬಂದಿರೋದು ನಾವು. ಪ್ರಾಥಮಿಕ ವರದಿ ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಅವರು ಮಾಡಿದ್ದಾರೋ ಇಲ್ಲವೋ ನಾನು ಹೇಳಲ್ಲ. ಮಾಧ್ಯಮಗಳಲ್ಲಿ 11 ಲಕ್ಷ ರೂ. ಬೇಡಿಕೆ ಇಟ್ಟಿದ್ದರ ಬಗ್ಗೆ ನೋಡಿದ್ದೇನೆ. ಗದಗ ಬಿಜೆಪಿ ಜಿಲ್ಲಾ ಅಧ್ಯಕ್ಷರಿಗೆ ಮಾಹಿತಿ ಕೇಳಿದ್ದು, ಎಲ್ಲಾ ಪ್ರೋಸಿಜರ್ ಮುಗಿದ ಮೆಲೆ ಮಾತನಾಡುತ್ತೆನೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
