ಹೊನ್ನಾವರ: ತಾಲೂಕಿನ ಹಳದಿಪುರ ಸಮೀಪದ ಚಂಡೇಶ್ವರ ಸ್ಮಶಾನದ ಹತ್ತಿರದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಹೊನ್ನಾವರ ಪೊಲೀಸರು ದಾಳಿ ನಡೆಸಿ 6 ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ.

 ಆರೋಪಿಗಳನ್ನು ಹಳದಿಪುರ ಅಗ್ರಹಾರದ ಶಿವಾನಂದ ಮಾಸ್ತಿ ಮುಕ್ರಿ, ಕುಮಟಾ ಹೆಗಡೆಯ ಪ್ರಶಾಂತ ಗಣಪತಿ ಮುಕ್ರಿ, ಹಳದಿಪುರ ಅಗ್ರಹಾರದ ವಿನೋದ ಕಣಿಯಾ ಮುಕ್ರಿ, ಬಡಗಣಿಯ ಮಂಜುನಾಥ ನಾರಾಯಣ ಮುಕ್ರಿ, ಹೊನ್ನಾವರ ದುಗ್ಗುರದ ಈಶ್ವರ ಮಲ್ಲೇಶ ಗೌಡ, ಕುಮಟಾ ಮುರುರಿನ ಶ್ರೀರಾಮ ಗಣಪತಿ ಮಡಿವಾಳ ಎಂದು ಗುರುತಿಸಲಾಗಿದೆ.

ಜುಲೈ 26ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಹಳದಿಪುರದ ಚಂಡೇಶ್ವರ ಸ್ಮಶಾನದ ಸಮೀಪದ ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ಕೋಳಿ ಹುಂಜಗಳನ್ನು ಕಾದಾಟಕ್ಕೆ ಬಿಟ್ಟು, ಅವುಗಳ ಮೇಲೆ ಹಣ ಪಣಕ್ಕಿಟ್ಟು ಜೂಜಾಟ ನಡೆಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಜೂಜಾಟಕ್ಕೆ ಬಳಸಲಾಗುತ್ತಿದ್ದ ಸ್ವತ್ತುಗಳೊಂದಿಗೆ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.