Ankola| ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಅಂಕೋಲಾ ಮತ್ತು ಗೋಕರ್ಣ ನಡುವೆ ಮಂಜಗುಣಿ ಬಳಿ ಗಂಗಾವಳಿ ನದಿಗೆ ನಿರ್ಮಿಸಿರುವ ಗಂಗಾವಳಿ ಸೇತುವೆಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಲೋಕಾರ್ಪಣೆ ಮಾಡಿದರು.

ಇದು ಅಂಕೋಲಾ ತಾಲೂಕಿನ ಮಂಜುಗುಣಿ ಗ್ರಾಮದಿಂದ ಕುಮಟಾ ತಾಲೂಕಿನ ಗಂಗಾವಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಗಂಗಾವಳಿ ನದಿಗೆ ಅಡ್ಡಲಾಗಿ ರೂ. 34.21 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆಯಾಗಿದೆ. ಈ ಸೇತುವೆ ಅಂಕೋಲಾ ಹಾಗೂ ಗೋಕರ್ಣದ ನಡುವಿನ ಪ್ರಯಾಣವನ್ನು ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಕಡಿಮೆಗೊಳಿಸಲಿದೆ.

ಮಂಜಗುಣಿಯಲ್ಲಿ ನಿರ್ಮಿಸಲಾದ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟ‌ರ್ ಮೂಲಕ ಬಂದಿಳಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್ ಹಾಗೂ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮೊದಲಾದವರು ಭವ್ಯ ಸ್ವಾಗತ ಕೋರಿದರು.

ಸೇತುವೆ ನಿರ್ಮಾಣ ಸ್ಥಳಕ್ಕೆ ಹಾಲಕ್ಕಿ ಸಮಾಜದ ಸಾಂಪ್ರದಾಯಿಕ ಗುಮಟೆ ಪಾಂಗ ವಾದನ, ಬಡಗು ಶೈಲಿಯ ಯಕ್ಷಗಾನ ನೃತ್ಯ, ಪೂರ್ಣಕುಂಭ ಸ್ವಾಗತದೊಂದಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರು ಶಿಲಾಫಲಕ ಅನಾವರಣಗೊಳಿಸಿ ವೇದಿಕೆಯಲ್ಲಿ ಕಲ್ಪವೃಕ್ಷದ ಸಿಂಗಾರ ಅರಳಿಸಿ ಸೇತುವೆಯ ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ, ಹಳಿಯಾಳ ಶಾಸಕ ಆ‌ರ್.ವಿ.ದೇಶಪಾಂಡೆ, ಶಿರಸಿ ಶಾಸಕ ಭೀಮಣ್ಣನಾಯ್ಕ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಮಾಜಿ ಶಾಸಕಿ ಶಾರದಾ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.