Mundagod| ಕಳೆದ ಶುಕ್ರವಾರ ರಾತ್ರಿ ಪಟ್ಟಣದ ಹೋಟೆಲ್ ನಲ್ಲಿ ನಡೆದ ರೌಡಿ ಶೀಟರ್ ಜಮೀರ್ ಅಹ್ಮದ್ ದರ್ಗಾವಾಲೆ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬೆಂಗಳೂರು ಸಮೀಪ ನೆಲಮಂಗಲದಲ್ಲಿ ಬಂಧಿಸಿ ಎರಡು ಕಂಟ್ರಿ ಮೇಡ್ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.
ಮುಂಡಗೋಡದ ಸಾಲಗಾಂವನ ಮಂಜುನಾಥ ನಾಗೇಂದ್ರ ಕಾಜಗಾರ (35) ಶ್ರೀಕಾಂತ ರಾಜಶೇಖರ ಕಿರಣ್ಣನವರ್ (22) ಧಾರವಾಡದ ಅಭಿಷೇಕ್ ಮಲ್ಲಿಕಾರ್ಜುನ ಬಡಶೆಟ್ಟಿ (22), ಮಂಜುನಾಥ್ ವಿಷ್ಣು ಬೆಳಗಾoವ (20), ದೀಪಕ ನಾಗರಾಜ ನವಲೆ (22) ಇವರುಗಳೇ ಬಂದಿತ ಆರೋಪಿಗಳು. ಆರೋಪಿತರಿಂದ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ, ಒಂದು ಕಾರು, 2 ಕಂಟ್ರಿ ಮೇಡ್ ಪಿಸ್ತೂಲ್ ಮತ್ತು 10 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶುಕ್ರವಾರ ರಾತ್ರಿ ಹನ್ನೊಂದರ ಸುಮಾರಿಗೆ ಪಟ್ಟಣದ KSRTC ಬಸ್ ನಿಲ್ದಾಣದ ಎದುರಿನ ಅಂಬಿಕಾ ಸಾವಜಿ ಹೊಟೇಲ್ ಗೆ ಸ್ನೇಹಿತನ ಜೊತೆ ಊಟಕ್ಕೆ ತೆರಳಿದ್ದ ರೌಡಿ ಶೀಟರ್ ಜಮೀರ್ ಅಹ್ಮದ್ ದರ್ಗಾವಾಲೆಯನ್ನು ಐದು ಜನರಿದ್ದ ಹಂತಕರ ತಂಡ ಕಾರದಪುಡಿ ಎರಚಿ ಸಿನಿಮೀಯ ರೀತಿಯಲ್ಲಿ ಮಚ್ಚಿನಿಂದ ಬರ್ಭರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ಹತ್ಯೆಯಾದ ಜಮೀರ್ ಅಹ್ಮದ್ ದರ್ಗಾವಾಲೆ ಹಾಗೂ ಆರೋಪಿ ಮಂಜುನಾಥ ನಾಗೇಂದ್ರ ಕಾಜಗಾರ ನಡುವೆ ಮೀಟರ್ ಬಡ್ಡಿ, ರಿಯಲ್ ಎಸ್ಟೇಟ್ ವ್ಯವಹಾರಗಳ ಕುರಿತಂತೆ , ಮನಸ್ತಾಪವಿದ್ದುದೇ ಈ ಕೊಲೆಗೆ ಕಾರಣ ಎಂದು ಹೇಳಲಾಗಿದೆ.
ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿದ್ದ ಮಂಜುನಾಥ್ ಮತ್ತು ಜಮೀರ್ ನಡುವೆ ವ್ಯವಹಾರ ಸಂಬಂಧಿತ ವೈಮನಸ್ಸು ಉಂಟಾಗಿತ್ತು. ಜಮೀರ್ ಅಹ್ಮದ್ ದರ್ಗಾವಾಲೆ ಮಂಜುನಾಥ್ ಜೊತೆ ಕೆಲಸ ಮಾಡುತ್ತಿದ್ದ ಕೆಲ ಯುವಕರನ್ನು ತನ್ನತ್ತ ಸೆಳೆದುಕೊಂಡಿದ್ದರಿಂದ ಇಬ್ಬರ ನಡುವಿನ ದ್ವೇಷ ಹೆಚ್ಚಾಗಿತ್ತು ಎನ್ನಲಾಗಿದೆ. ಜೊತೆಗೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಮೀರ್ ನೀಡುತ್ತಿದ್ದ ಕಿರುಕುಳದಿಂದ ಮಂಜುನಾಥ್ ಮುಂಡಗೋಡ ಬಿಟ್ಟು ಹುಬ್ಬಳ್ಳಿಗೆ ಸ್ಥಳಾಂತರಗೊಂಡಿದ್ದ.
ಫೈನಾನ್ಸ್, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಸಂಪಾದಿಸುತ್ತಿದ್ದುದರಿಂದ ಮಂಜುನಾಥ್‌ಗೆ ಸಹಜವಾಗಿ ಜಮೀರ್ ಅಹ್ಮದ್ ಮೇಲೆ ಅಸಮಾಧಾನ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಮಂಜುನಾಥನು ಹುಬ್ಬಳ್ಳಿ ಮೂಲದ ಹಂತಕರಿಗೆ ಸುಪಾರಿ ನೀಡಿ ಜಮೀರ್ ಕೊಲೆ ಮಾಡಿಸಿದ್ದ ಎನ್ನಲಾಗಿದೆ.
