Karwar| ಹೋಟೆಲ್‌ಗಳಲ್ಲಿ ವಾಣಿಜ್ಯ ಬಳಕೆಯ ಬದಲಾಗಿ ಗೃಹಬಳಕೆಯ LPG ಸಿಲೆಂಡರ್ ಬಳಸುತ್ತಿದ್ದ ಆರೋಪದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ತಹಶೀಲ್ದಾರ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸಿಲೆಂಡರ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಕಾರವಾರ ತಹಶೀಲ್ದಾರ್ ನಿಶ್ಚಲ್ ನರೋನಾ ನೇತೃತ್ವದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳಾದ ರಾಜೇಶ್ ವಾರಿಕ್, ಶಿರಸ್ತೇದಾರ್ ದೀಪಕ್ ನಾಯಕ್ ಅವರ ತಂಡ ಕಾರವಾರ ನಗರದಲ್ಲಿನ ಕುಟ್ಹಿನೋ ರಸ್ತೆಯ ಅಯೋಧ್ಯೆ ಖಾನಾವಳಿ ಹಾಗೂ ದೋಬಿಘಾಟ್ ಬಳಿಯ ಬಸವೇಶ್ವರ ಖಾನಾವಳಿ ಹೋಟೆಲ್‌ಗಳ ಮೇಲೆ ದಾಳಿ ನಡೆಸಿತು.

ದಾಳಿಯ ವೇಳೆ ಹೋಟೆಲ್‌ಗಳಲ್ಲಿ ಆಹಾರ ತಯಾರಿಕೆಗೆ ಗೃಹಬಳಕೆಯ ಎಲ್‌ಪಿಜಿ ಸಿಲೆಂಡರ್ ಬಳಸುತ್ತಿರುವುದು ಪತ್ತೆಯಾಯಿತು. ವಾಣಿಜ್ಯ ಉದ್ದೇಶಕ್ಕೆ ಗೃಹಬಳಕೆಯ ಸಿಲೆಂಡರ್ ಬಳಸುವುದು ನಿಯಮಬಾಹಿರವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಿಲೆಂಡರ್‌ಗಳನ್ನು ವಶಕ್ಕೆ ಪಡೆದು ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಪರಿಣಾಮವಾಗಿ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಹಾಗೂ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದುದರಿಂದ ಎಲ್‌ಪಿಜಿ ಬಳಕೆಯ ಮೇಲೂ ಸರ್ಕಾರ ಕಟ್ಟುನಿಟ್ಟಿನ ನಿಗಾವಹಿಸಿದೆ.
ಈ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆಗೆ ಗೃಹಬಳಕೆಯ ಸಿಲೆಂಡರ್ ದುರುಪಯೋಗವಾಗದಂತೆ ಜಿಲ್ಲೆಯಲ್ಲಿ ತಪಾಸಣೆ ಕ್ರಮಗಳನ್ನು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮವಾಗಿ ಗೃಹಬಳಕೆಯ ಸಿಲೆಂಡರ್ ಬಳಸುವವರ ವಿರುದ್ಧ ಮುಂದಿನ ದಿನಗಳಲ್ಲೂ ದಾಳಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
