Siddapur| ಕಳೆದ ನಾಲ್ಕು ವರ್ಷಗಳಿಂದ ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಸಿದ್ಧಾಪುರ ಪೋಲಿಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಹಳ್ಳೂರಕೇರಿ ಫಾರುಖ್ ಉಲ್ಲಾ (24) ಎಂಬಾತನೇ ಬಂಧಿತ ಆರೋಪಿ. ಈತನ ವಿರುದ್ದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 03/2017 u/s 457,380 IPC ಕಾಯಿದೆ ಅಡಿಯಲ್ಲಿ ಮನೆಕಳ್ಳತನ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಈತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಆಸಾಮಿ ಬೇರೆ ಜಿಲ್ಲೆಯವನಾಗಿದ್ದರಿಂದ ಶಿಕ್ಷೆಯಿಂದ ಬಚಾವ್ ಆಗಲು ಕಳೆದ 4 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಣ್ತಪ್ಪಿಸಿ ಪರಾರಿಯಾಗಿದ್ದ. ಸಿದ್ದಾಪುರ ನ್ಯಾಯಾಲಯವು ಈತನ ವಿರುದ್ದ ದಸ್ತಗಿರಿ ವಾರಂಟು ಹೊರಡಿಸಿತ್ತು.
ಭಿಕ್ಷುಕನ ವೇಷ ಧರಿಸಿದ್ದ ಆರೋಪಿ: ಸಿದ್ದಾಪುರ ಪೊಲೀಸರು ಆರೋಪಿಯ ಪತ್ತೆಗಾಗಿ ಶಿವಮೊಗ್ಗ, ಹಾವೇರಿ, ಮಂಗಳೂರು ಮುಂತಾದೆಡೆ ತಿರುಗಾಡಿ ಮಾಹಿತಿ ಸಂಗ್ರಹಿಸಿದ್ದರು. ಆದರೆ, ಆರೋಪಿ ಉಡುಪಿ ಜಿಲ್ಲೆಯ ತ್ರಾಸಿಯಲ್ಲಿ ವೇಷ ಬದಲಾಯಿಸಿಕೊಂಡು ಭಿಕ್ಷಾಟನೆಯಲ್ಲಿ ತೊಡಗಿಕೊಂಡಿದ್ದ. ಕೊನೆಗೂ ಈತನನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈತನ ವಿರುದ್ಧ ಶಿವಮೊಗ್ಗ ಮತ್ತು ಉತ್ತರಕನ್ನಡದ ಹಲವಾರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸಿದ್ದಾಪುರ ಠಾಣೆಯ ತನಿಖಾ ವಿಭಾಗದ ಪಿಎಸ್ಐ ನಾಗಪ್ಪ ಬಿ ನೇತೃತ್ವದಲ್ಲಿ ಸಿಬ್ಬಂದಿ ಚೇತನಕುಮಾರ ಹಲಗೇರಿ, ಭರತ ಕುಮಾರ ಕೆ.ಜೆ, ಶಶಿಕಾಂತ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
