Siddapur| ತಾಲೂಕು ವ್ಯಾಪ್ತಿಯ ಜೋಗ ಜಲಪಾತದ ಅಪಾಯಕಾರಿ ಪ್ರದೇಶಕ್ಕೆ ತೆರಳಿ ವಿಡಿಯೋ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ಆರೋಪದಡಿ ಯೂಟ್ಯೂಬರ್ ಸೇರಿದಂತೆ ಮೂವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೂ ಟ್ಯೂಬರ್ ಮೋಹನ ಶುಭಕರ ಗೌಡ (26), ಭರತ ಗೌಡ (27) ಮತ್ತು ಮದನ ಗೌಡ ಈ ಮೂವರ ಮೇಲೆ ದೂರು ದಾಖಲಾಗಿದೆ. ಮೂವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಜೋಗಿನ್‌ಕೊಪ್ಪದವರಾಗಿದ್ದಾರೆ.
ಪತ್ತೆಯಾಗಿದ್ದು ಹೇಗೆ? ಅಪಾಯಕಾರಿ ಸ್ಥಳಕ್ಕೆ ಪ್ರವಾಸಿಗರು ಹೋಗದಂತೆ ಎಚ್ಚರಿಕೆ ಇರುವ ಜೋಗ ಜಲಪಾತದ ಅಪಾಯಕಾರಿ ರಾಜಾ ಜಲಪಾತದ ಕಲ್ಲಿನ ಬಂಡೆಯ ಮೇಲೆ ಹೋಗಿ, ಜೋಗಫಾಲ್ಸ್ ಎಷ್ಟು ಎತ್ತರದಿಂದ ನೀರು ಬಿಳುತ್ತದೆ… ಕೆಳಗಡೆ ಪುಲ್ ಪ್ರಪಾತ ಗಾಯ್ಸ್…. ಪುಲ್… ಹೆದರಿಕೆ…ನೆಕ್ಸ್ಟ್ ಲೇವಲ್ ವ್ಯೂ ಗಾಯ್ಸ್… ಎಂದು ಹೇಳಿ ವಿಡಿಯೋ ಮಾಡಿ ತನ್ನ ‘ಮಿಸ್ಟರ್ ಕನ್ನಡಿಗ’ ಎಂಬ ಖಾತೆಯ ಇನ್ಸ್ಟಾಗ್ರಾಂ ದಲ್ಲಿ ಪೊಸ್ಟ್ ಮಾಡಿರುತ್ತಾನೆ. ಅಲ್ಲದೇ ಆತನೊಂದಿಗೆ ಇದ್ದ ಇಬ್ಬರೂ ಸಹ ಜೋಗ ರಾಜಾ ಫಾಲ್ಸ್ ಬಗ್ಗೆ ಮಾತನಾಡುತ್ತಾ ಧುಮ್ಮುಕ್ಕಿ ಹರಿಯುವ ರಾಜಾ ಫಾಲ್ಸ್ ಹಾಗೂ ಇತರೇ ಫಾಲ್ಸ್ ಗಳ ಮೇಲಿನಿಂದ ಕೆಳಗಡೆವರೆಗೆ ನೀರು ಬಿಳ್ಳುವ ವಿಡಿಯೋ ಹಂಚಿಕೊಂಡಿರುತ್ತಾರೆ.
ಸಾಮಾಜಿಕ ಜಾಲತಾಣ ಪರಿಶೀಲನೆ ನಡೆಸುವಾಗ ಸಿದ್ದಾಪುರ ಠಾಣೆಯ ಸೋಷಿಯಲ್ ಮಾನಿಟರಿಂಗ್ ಮಾಡುವ ಸಿಬ್ಬಂದಿಗಳ ಕಣ್ಣಿಗೆ ಈ ವಿಡಿಯೋ ಬಿದ್ದಿದೆ. ಈ ವಿಡಿಯೋವನ್ನು ನೋಡಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಅಪಾಯಕಾರಿ ಸ್ಥಳಕ್ಕೆ ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಹಾಗೂ ಜಲಪಾತದ ಅಪಾಯಕಾರಿ ಪ್ರದೇಶಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿದ್ದರೂ ನಿಯಮ ಉಲ್ಲಂಘಿಸಿದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
