Karwar| ಗೋವಾದಿಂದ ಮಂಗಳೂರು ಕಡೆ ಸಾಗಿಸಲಾಗುತ್ತಿದ್ದ ಲಕ್ಷಾಂತರ ಮೌಲ್ಯದ ಗೋವಾ ಮದ್ಯವನ್ನು (Goa Liquor) ಇಲ್ಲಿನ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ (Majali Check Post) ಅಬಕಾರಿ ಇಲಾಖೆ ಸಿಬ್ಬಂದಿಗಳು ಪತ್ತೆ ಹಚ್ಚಿ, ಅಪಾರ ಪ್ರಮಾಣದ ಮದ್ಯ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ. ಕೇರಳ ಮೂಲದ ಆರೋಪಿ ಚಾಲಕನನ್ನು ಸಹ ವಶಕ್ಕೆ ಪಡೆದಿದ್ದಾರೆ.

ಕೇರಳದ ಕಾಸರಗೋಡಿನ ಪೆರಿಯಾ ಗ್ರಾಮದ ನಿವಾಸಿ ಮನ್ಸೂರ್ ಮುಹಮ್ಮದ್ (32) ಎಂಬಾತನೇ ಅಕ್ರಮ ಮದ್ಯ ಸಾಗಾಟದಲ್ಲಿ ತೊಡಗಿದ್ದ ವ್ಯಕ್ತಿ. ಜೂ. 28 ರಂದು ತಾಲೂಕಿನ ಮಾಜಾಳಿ ಚೆಕ್‌ಪೋಸ್ಟ್ ಬಳಿ ಅಬಕಾರಿ ಸಿಬ್ಬಂದಿಗಳು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಅಶೋಕ್ ಲೇಲ್ಯಾಂಡ್ ನಾಲ್ಕು ಚಕ್ರದ ಗೂಡ್ಸ್ ವಾಹನ ( KE 41 D 1087) ಅನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಯಾವುದೇ ಪರವಾನಗಿ ಇಲ್ಲದೆ ಗೋವಾ ರಾಜ್ಯದಿಂದ ಅನಧಿಕೃತವಾಗಿ ವಿವಿಧ ಬ್ರ್ಯಾಂಡ್‌ಗಳ ಒಟ್ಟು 1296 ಲೀಟರ್ (150 ಬಾಕ್ಸ್) ಮದ್ಯವನ್ನು ಮಂಗಳೂರು ಕಡೆಗೆ ಸಾಗಿಸುತ್ತಿದ್ದದ್ದು ಪತ್ತೆಯಾಗಿದೆ.

₹9 ಲಕ್ಷ ಮೌಲ್ಯದ ಗೋವಾ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ ವಾಹನ ₹8 ಲಕ್ಷ ಮೌಲ್ಯದೆಂದು ಅಂದಾಜಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಅಬಕಾರಿ ಅಧಿಕಾರಿಗಳು, ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿ, ವಾಹನ ಮತ್ತು ಮದ್ಯವನ್ನು ಜಪ್ತಿ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.