ಭಟ್ಕಳ: ತಾಲೂಕಿನ ವೆಂಕಟಾಪುರ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಗುರುವಾರ ತಡರಾತ್ರಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಗಾಯಗೊಂಡ ಘಟನೆ ನಡೆದಿದೆ.
ಹಾವೇರಿ ಮೂಲದ ಭೀಮಪ್ಪ ಹನುಮಂತಪ್ಪ ಗಣಜೂರು ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಭಟ್ಕಳದಿಂದ ಹೊನ್ನಾವರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬಲಭಾಗಕ್ಕೆ ಹೋಗಿ ಎದುರಿನಿಂದ ಬರುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಮಾರುತಿ ಸ್ವಿಫ್ಟ್ ಕಾರಿಗೆ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಅಪಘಾತದ ಪರಿಣಾಮ ಕಾರಿನಲ್ಲಿದ್ದ ಮೊಹಮ್ಮದ್ ಮುಶಾಫರ್ (26), ಫೌಜಿಯಾ ಎ., ಮೊಹಮ್ಮದ್ ಅಶ್ರಫ್ (29), ಮೊಹಮ್ಮದ್ ಅಶ್ರಫ್ ಇಸ್ಮಾಯಿಲ್ (34), ಅಬ್ದುಲ್ ಖಾದರ್ ಅಜ್ವಲ್ (21) ಹಾಗೂ ಮೊಹಮ್ಮದ್ ಅಸ್ಥಾನ್ (19) ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ಗೆ ಕರೆ ಮಾಡಿದರೂ ವಿಳಂಬವಾಗಿದ್ದ ಹಿನ್ನೆಲೆ ಹೆದ್ದಾರಿ ಪೊಲೀಸ್ ಗಸ್ತು ವಾಹನದಲ್ಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ.
ಎರಡೂ ಕಾರಿನ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿದ್ದರಿಂದ ಹಾಗೂ ವಾಹನಗಳ ಏರ್ಬ್ಯಾಗ್ಗಳು ತೆರೆದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಜಾರ್ಜುನಯ್ಯ ಕೊರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
