ಅಂಕೋಲಾ| ತುಮಕೂರು ಬಳಿ ಕಾರಿನಲ್ಲೇ ಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಅಂಕೋಲಾ ತಾಲೂಕಿನ ನಾಗೇಂದ್ರ ಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಶಕ್ಕೆ ಪಡೆದವರಲ್ಲಿ ಅಂಕೋಲಾ ಸರಳೆಬೈಲ್ ಗ್ರಾಮದ ನಾರಾಯಣ ಡೊಳ್ಳಗೌಡ, ನಾಗರಾಜ ಡೊಳ್ಳಗೌಡ ಹಾಗೂ ಸಂದೀಪ ಲೋಕುಗೌಡ ಸೇರಿದಂತೆ ನಾಲ್ವರು ಇದ್ದಾರೆ ಎಂದು ತಿಳಿದುಬಂದಿದೆ.

ಇವರಿಗೆ ನಾಡಬಾಂಬ್ ತಯಾರಿಕೆ ಬಗ್ಗೆ ಮಾಹಿತಿ ಇದ್ದು, ಹಂದಿ ಹಿಡಿಯಲು ಬಳಸುವ ಬಾಂಬ್ ತಯಾರಿಕೆಯಲ್ಲಿ ಪರಿಣಿತರಾಗಿದ್ದಾರೆ ಎನ್ನಲಾಗಿದೆ. ಮೃತ ನಾಗೇಂದ್ರ ಗೌಡ ಇವರಿಂದಲೇ ಬಾಂಬ್ ಪಡೆದುಕೊಂಡಿದ್ದಾನೆ ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾಗಿದೆ. ಇನ್ನು ಹೊನ್ನಾವರ ತಾಲೂಕಿನ ಚಂದಾವರ ಮೂಲದ ವ್ಯಕ್ತಿಯೊಬ್ಬರು ಬಾಂಬ್ ಸಿದ್ಧಪಡಿಸಿ ನಾಗೇಂದ್ರನಿಗೆ ನೀಡಿದ್ದರು ಎನ್ನುವ ಶಂಕೆಯ ಮೇರೆಗೆ ಆತನನ್ನೂ ವಿಚಾರಣೆ ನಡೆಸಲಾಗುತ್ತಿದೆ.

ನಾಗೇಂದ್ರ ಗೌಡ ಈ ಹಿಂದೆ ಸ್ನೇಹಿತರೊಂದಿಗೆ ತೆರಳಿ ನಾಡಬಾಂಬ್ ಖರೀದಿಸುತ್ತಿದ್ದ ಎನ್ನಲಾಗಿದ್ದು, ಮೀನು ಶಿಕಾರಿಗೆ ಬಳಸುವುದಾಗಿ ಹೇಳಿ ಬಾಂಬ್ ಪಡೆದಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಾಂಬ್ ತಯಾರಿಕೆ, ಸಾಗಾಟ ಹಾಗೂ ಪ್ರಕರಣದ ಹಿನ್ನೆಲೆಯ ಕುರಿತು ಅಂಕೋಲಾ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆಗೆ ಒಟ್ಟು ಮೂರು ತಂಡಗಳನ್ನು ರಚಿಸಲಾಗಿದ್ದು, ಗೋಕರ್ಣ ಪೊಲೀಸ್ ಠಾಣೆ ಪಿಐ ಶ್ರೀಧರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.