ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಅಂಡಿಂಜೆ ಗ್ರಾಮದಲ್ಲಿ ನಕಲಿ ಕರೆನ್ಸಿ ನೋಟು ಮುದ್ರಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು, ಏಳು ಮಂದಿಯನ್ನು ಬಂಧಿಸಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಮಾಹಿತಿ ನೀಡಿದ್ದು, ಆರೋಪಿಗಳು ಬಾಡಿಗೆ ಮನೆಯೊಂದನ್ನು ಪಡೆದು ಅಲ್ಲಿ ನಕಲಿ ₹500 ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಪೊಲೀಸರು ದಾಳಿ ನಡೆಸಿದ ವೇಳೆ ಆರೋಪಿಗಳು ನಕಲಿ ನೋಟು ತಯಾರಿಕೆಯಲ್ಲಿ ತೊಡಗಿದ್ದರೆಂದು ತಿಳಿದುಬಂದಿದೆ. ಸ್ಥಳದಿಂದ ₹500 ಮುಖಬೆಲೆಯ ನೋಟುಗಳ ಬಂಡಲ್‌ಗಳು, 21 ಎ4 ಗಾತ್ರದ ಕಾಗದಗಳಲ್ಲಿ ಮುದ್ರಿಸಿ ಇಟ್ಟಿದ್ದ ನಕಲಿ ನೋಟುಗಳು, ಕಂಪ್ಯೂಟರ್ ಮಾನಿಟರ್, ಸಿಪಿಯು, ಪ್ರಿಂಟರ್, ಕಟ್ಟಿಂಗ್ ಬ್ಲೇಡ್, ಗಾಂಧೀಜಿಯ ಚಿತ್ರವಿರುವ ಸೀಲ್ ಹಾಗೂ ಆರ್‌ಬಿಐ ಭದ್ರತಾ ಸೆಕ್ಯುರಿಟಿ ಥ್ರೆಡ್ ಸೇರಿದಂತೆ ನೋಟು ಮುದ್ರಣಕ್ಕೆ ಬಳಸಲಾಗುತ್ತಿದ್ದ ವಿವಿಧ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಈ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ.