Ankola| ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಸಮೀಪ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ದೋಣಿ ಮುಳುಗಿದ ಪರಿಣಾಮ ಓರ್ವ ಮೀನುಗಾರ ಮೃತಪಟ್ಟಿರುವ ದುರ್ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ.

ಅಂಕೋಲಾ ತಾಲೂಕಿನ ಗಾಬಿತವಾಡದ ನಿವಾಸಿ ಸಹದೇವ್ ಮೆತಾ (50) ಎಂಬುವವನೇ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೀನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಸಹದೇವ, ಎಂದಿನಂತೆ ಶನಿವಾರ ಮುಂಜಾನೆ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ. ಈ ವೇಳೆ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾಗಿದ್ದ ಕಾರಣ ಅವರ ಮೀನುಗಾರಿಕಾ ದೋಣಿ ಏಕಾಏಕಿ ಮುಳುಗಿದೆ ಎನ್ನಲಾಗಿದೆ. ಘಟನೆ ಗಮನಿಸಿದ ಸಮೀಪದಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ಇತರ ಮೀನುಗಾರರು ತಕ್ಷಣ ರಕ್ಷಣಾ ಕಾರ್ಯಕ್ಕೆ ಧಾವಿಸಿ ಸಹದೇವ್ ಅವರನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ, ದುರದೃಷ್ಟವಶಾತ್ ಸಹದೇವ್ ಅವರನ್ನು ಬದುಕಿಸಲು ಸಾಧ್ಯವಾಗದೇ ಅವರು ಮೃತಪಟ್ಟಿದ್ದಾರೆ.

ಘಟನೆಯ ಸ್ಥಳದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.