Bitumen ship from UAE arrives at Karwar port| ಮಧ್ಯಪ್ರಾಚ್ಯದಲ್ಲಿ ಉಂಟಾದ ಬಿಕ್ಕಟ್ಟಿನ ಪರಿಣಾಮವಾಗಿ ಕೆಲಕಾಲ ಚಟುವಟಿಕೆ ಕಡಿಮೆಯಾಗಿದ್ದ ಕಾರವಾರ ಬಂದರಿಗೆ ಕೊನೆಗೂ ಅಂತಾರಾಷ್ಟ್ರೀಯ ಹಡಗು ಆಗಮಿಸಿದೆ. ಈ ಮೂಲಕ ದೇಶಕ್ಕೆ ಇಂಧನ ಪೂರೈಕೆಯ ವಿವಿಧ ಹಡಗುಗಳು ಶೀಘ್ರದಲ್ಲಿ ಆಗಮಿಸುವ ಭರವಸೆ ದೊರಕಿದೆ.

ಯುಎಇಯ ಖೊರ್ಫಕ್ಕಾನ್‌ನಿಂದ ಹೊರಟಿದ್ದ “ಎಂಟಿ ಚೆಂಗ್ ಎಕ್ಸ್” (MT Cheng X) ಹೆಸರಿನ ಹಡಗು ಮಾರ್ಚ್ 12ರಂದು ಕಾರವಾರ ಬಂದರು ತಲುಪಿದ್ದು, 3115.498 ಮೆಟ್ರಿಕ್ ಟನ್ ಬಿಟುಮಿನ್ ಸಾಗಣೆ ಮಾಡಿತ್ತು.
ಸುಮಾರು 5,500 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿರುವ ಈ ಹಡಗು ಮಾ.3ರಂದು ಯುಎಇಯ ಖೊರ್ಫಕ್ಕಾನ್ ಬಂದರಿನಿಂದ ಹೊರಟಿತ್ತು. ಬಿಟುಮಿನ್ ಅನ್‌ಲೋಡ್ ಕಾರ್ಯ ಮುಗಿದ ನಂತರ ಶುಕ್ರವಾರ ಸಂಜೆ ಹಡಗು ವಾಪಸ್ ತೆರಳಿದೆ.

ಈ ನಡುವೆ ಬಿಟುಮಿನ್ ಪೂರೈಕೆಯಿಲ್ಲದೆ ಖಾಲಿ ನಿಂತಿದ್ದ ಟ್ಯಾಂಕರ್‌ಗಳು ಬಂದರಿನಲ್ಲಿ ಬಿಟುಮಿನ್ ತುಂಬಿಸಿಕೊಂಡು ವಿವಿಧ ಪ್ರದೇಶಗಳತ್ತ ಪ್ರಯಾಣ ಬೆಳೆಸಿವೆ.
ಇರಾನ್ ಹಾಗೂ ಇತರ ರಾಷ್ಟ್ರಗಳ ನಡುವಿನ ಯುದ್ಧ ಪರಿಸ್ಥಿತಿ ಹಿನ್ನೆಲೆ ಹರ್ಮೋಜ್ ಜಲಸಂಧಿಯಿಂದ ಹಡಗು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ಕಾರಣದಿಂದ ಯುಎಇಯ ಇನ್ನೊಂದು ಭಾಗದಿಂದ ಭಾರತದ ಪಶ್ಚಿಮ ಕರಾವಳಿ ಮಾರ್ಗವಾಗಿ ಹಡಗು ಕಾರವಾರ ಬಂದರನ್ನು ತಲುಪಿದೆ ಎಂದು ತಿಳಿದುಬಂದಿದೆ.

ಜೊತೆಗೆ ಗುಜರಾತಿನ ಕಾಂಡ್ಲಾ ಬಂದರಿನಿಂದ ಸುಮಾರು 23,000 ಮೆಟ್ರಿಕ್ ಟನ್ ಇಂಡಸ್ಟ್ರಿಯಲ್ ಸಾಲ್ಟ್ (NaCl) ಕೂಡ ಹಡಗಿನ ಮೂಲಕ ಕಾರವಾರ ಬಂದರಿಗೆ ಆಗಮಿಸಿ ಅನ್‌ಲೋಡ್ ಮಾಡಲಾಗಿದೆ.

ಅಂತಾರಾಷ್ಟ್ರೀಯ ಹಡಗಿನ ಆಗಮನದೊಂದಿಗೆ ಮುಂದಿನ ದಿನಗಳಲ್ಲಿ ಕಚ್ಚಾ ಇಂಧನ ಸೇರಿದಂತೆ ವಿವಿಧ ಸರಕು ಸಾಗಣೆ ಹಡಗುಗಳು ಕರ್ನಾಟಕ ಹಾಗೂ ಭಾರತದ ಇತರ ಬಂದರುಗಳಿಗೆ ಆಗಮಿಸುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.