Karwar| ‘ಶತ್ರುವಿನ ಶತ್ರು ಮಿತ್ರ’ ಇದು ರಾಜಕೀಯ ತಂತ್ರಗಾರಿಕೆಯ ಭಾಗ. ಭಟ್ಕಳದ ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ ಕೂಡಾ ಇದೇ ತಂತ್ರಗಾರಿಕೆ ಹೆಣೆದು ಕಾರವಾರ ಶಾಸಕ ಸೈಲ್ ಬೆಂಬಲಕ್ಕೆ ನಿಂತ ಘಟನೆ ನಡೆಯಿತು.
ಕಾರವಾರದ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಔಷಧಿಯ ಲಭ್ಯತೆ ಹಾಗೂ ಡಾಕ್ಟರ್ ಗಳ ವಿಷಯಕ್ಕೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ನಡುವೆ ಮಾತಿನ ವಾಗ್ವಾದ ನಡೆದು ಕೊನೆಗೆ ಸೈಲ್ ಅಸಮಾಧಾನದಿಂದ ಸಭೆ ಮಧ್ಯೆಯೇ ಎದ್ದು ತಾನೂ ‘ಅಂಗೂಟಾ ಛಾಪ್ ಅಲ್ಲ’ ಎಂದು ಹೇಳಿ ಹೊರ ನಡೆದಿದ್ದರು.
ಸೈಲ್ ಅವರ ಈ ನಡೆಯನ್ನು ಕೇವಲ ಅವರೊಬ್ಬರನ್ನೇ ಹೊರತು ಪಡಿಸಿ, ಉಳಿದವರಾರು ಅಂದರೇ, ಅವರದೇ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಸ್ವಪಕ್ಷೀಯ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು ಸೇರಿದಂತೆ ಯಾರೊಬ್ಬರು ಕೂಡಾ ಬೆಂಬಲಿಸಿರಲಿಲ್ಲ. ಆದರೆ ಭಟ್ಕಳದ ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ, ಸಭೆಯಿಂದ ಸೈಲ್ ‘ವಾಕ್ ಔಟ್’ ಮಾಡಿದ್ದನ್ನು ಸಮರ್ಥಿಸಿಕೊಂಡು ಕಾರವಾರದಲ್ಲಿ ಮಾತನಾಡಿ, ಕೆಡಿಪಿ ಸಭೆಯಲ್ಲಿ ಶಾಸಕ ಸೈಲ್ ಎತ್ತಿದ ವಿಷಯಕ್ಕೆ ಉಸ್ತುವಾರಿ ಸಚಿವ ವೈದ್ಯ ಸರಿಯಾದ ಮಾಹಿತಿ, ಸ್ಪಷ್ಟನೆ ನೀಡಬೇಕಿತ್ತು.
ಅದು ಉಸ್ತುವಾರಿ ಸಚಿವರ ಜವಾಬ್ದಾರಿ ಕೂಡಾ. ಆದರೆ ಉಸ್ತುವಾರಿ ಸಚಿವ ವೈದ್ಯ ತನ್ನ ಹುದ್ದೆಯ ಜವಾಬ್ದಾರಿ ನಿಭಾಯಿಸಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅವರಿಗೆ ಸಚಿವ ಹುದ್ದೆ ನಿಭಾಯಿಸುವ ಅರ್ಹತೆ, ಯೋಗ್ಯತೆ, ಸಾಮರ್ಥ್ಯವೇ ಇಲ್ಲ. ಅವರೊಬ್ಬ ದಗಲ್ ಬಾಜಿ ವ್ಯಕ್ತಿ.
ಶಾಸಕರಾಗಿ ಪಾಪ ಸೈಲ್ ಆದ್ರೂ ಏನ್ ಮಾಡ್ತಾರೆ. ಅನಿವಾರ್ಯವಾಗಿ ಸಭೆಯಿಂದ ವಾಕ್ ಔಟ್ ಮಾಡಿದ್ರು ಎಂದು ಸೈಲ್ ನಡೆ ಸಮರ್ಥಿಸಿಕೊಂಡರು. ಒಟ್ಟಾರೆ ‘ವಾಕ್ ಔಟ್’ ನಡೆಗೆ ಭಟ್ಕಳದ ಮಾಸ್ತಪ್ಪ ನಾಯ್ಕರಿಂದ ದೊರೆತ ಬೆಂಬಲ, ಮುಂದಿನ ದಿನಗಳಲ್ಲಿ ಸೈಲ್ ಗೆ ‘ಉಸ್ತುವಾರಿ’ ಕನಸು ನನಸು ಮಾಡುತ್ತದೆಯೋ ಎಂಬುದು ಕಾದು ನೋಡಬೇಕಿದೆ.
