Hariyana/Gurugram: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಭಾರತಕ್ಕೆ ಗ್ಯಾಸ್ ಪೂರೈಕೆಯಾಗದ ಕಾರಣ ಬಳಕೆದಾರರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಗ್ಯಾಸ್ ಬುಕ್ಕಿಂಗ್ ಮಾಡಿದ್ರೂ ಕ್ಲಪ್ತ ಸಮಯದಲ್ಲಿ ಮನೆ ಮನೆಗಳಿಗೆ ಗ್ಯಾಸ್ ಪೂರೈಕೆಯಾಗ್ತಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಜನರು ಗ್ಯಾಸ್‌ಗಾಗಿ ಬಕ್ಕಿಂಗ್ ಮಾಡಿ ಕಾಯಬೇಕಿಲ್ಲ, ಬದಲಾಗಿ ಎಟಿಎಂನಲ್ಲೇ ಪಡೆದುಕೊಳ್ಳಬಹುದು. 

ಹೌದು, ಜನರು ಬ್ಯಾಂಕ್ ಎಟಿಎಂನಿಂದ ಹಣ ತೆಗೆಯುವಷ್ಟೇ ಸುಲಭದಲ್ಲಿ ಇನ್ಮುಂದೆ ಗ್ಯಾಸ್ ಸಿಲಿಂಡರ್ ಕೂಡಾ ಪಡೆದುಕೊಳ್ಳಬಹುದು. ಈ ತಂತ್ರಜ್ಞಾನ ಭಾರತದಲ್ಲಿ ಆರಂಭವಾಗಿದ್ದು, ಎರಡೇ ನಿಮಿಷದಲ್ಲಿ ಗ್ಯಾಸ್ ಸಿಲಿಂಡರ್ ನಮ್ಮ ಕೈ ಸೇರಲಿದೆ. 

*2- 3 ನಿಮಿಷದಲ್ಲಿ ಸಿಲಿಂಡರ್ ರೀಫಿಲ್*

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ದೇಶದಲ್ಲೇ ಮೊದಲ ಬಾರಿಗೆ ‘ಎಲ್‌ಪಿಜಿ ಎಟಿಎಂ’ (LPG ATM) ಅನ್ನು ಹರಿಯಾಣದ ಗುರುಗ್ರಾಮದಲ್ಲಿ ಪ್ರಾಯೋಗಿಕವಾಗಿ ಆರಂಭ ಮಾಡಿದೆ. ಸೋಹ್ನಾದ ಸೆಕ್ಟರ್ 33ರ ಸೆಂಟ್ರಲ್ ಪಾರ್ಕ್ ಫ್ಲವರ್ ವ್ಯಾಲಿಯಲ್ಲಿ ಮೊದಲ ಹಂತವಾಗಿ ಈ ಎಟಿಎಂ ಅಳವಡಿಸಲಾಗಿದ್ದು, ಕೇವಲ 2 ರಿಂದ 3 ನಿಮಿಷಗಳಲ್ಲಿ ಸಿಲಿಂಡರ್ ಅನ್ನು ರೀಫಿಲ್ ಮಾಡುವ ಮೂಲಕ ಜನರ ತಲೆನೋವು ಕಡಿಮೆ ಮಾಡಿದೆ.

*ಎಟಿಎಂ ಹೇಗೆ ಕೆಲಸ ಮಾಡುತ್ತದೆ ?*

ಈ ಎಟಿಎಂ ಸಂಪೂರ್ಣವಾಗಿ ಸ್ವಯಂಚಾಲಿತವಾಗಿದ್ದು, ಇದು ಹಲವು ವೈಶಿಷ್ಟ್ಯಗಳ ಜತೆ ಮಾನವ ಸಂಪರ್ಕವಿಲ್ಲದೇ (Contactless) ಕೆಲಸ ಮಾಡುತ್ತದೆ. ಇಲ್ಲಿ ಕಬ್ಬಿಣದ ಸಿಲಿಂಡರ್‌ಗಳ ಬದಲಿಗೆ ಹಗುರವಾದ ಮತ್ತು ಸ್ವಚ್ಛವಾದ ‘ಕಾಂಪೋಸಿಟ್ ಸಿಲಿಂಡರ್‌’ಗಳನ್ನು ಬಳಸಲಾಗುತ್ತದೆ. ಕಬ್ಬಿಣದ ಸಿಲಿಂಡರ್‌ಗಳು ಗ್ಯಾಸ್ ಸೇರಿ 31 ಕೆ.ಜಿ. ತೂಗಿದರೆ, ಇವು ಕೇವಲ 15 ಕೆ.ಜಿ. ತೂಗುತ್ತವೆ. ಈ ಸಿಲಿಂಡರ್‌ಗಳು ಪಾರದರ್ಶಕವಾಗಿದ್ದು, ಒಳಗಿರುವ ಅನಿಲದ ಮಟ್ಟವನ್ನು ಕೂಡಾ ಗ್ರಾಹಕರು ಸುಲಭವಾಗಿ ನೋಡಬಹುದು. ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಒಟಿಪಿ (OTP) ಮೂಲಕ ಪರಿಶೀಲಿಸಬೇಕು. ನಂತರ ಖಾಲಿ ಸಿಲಿಂಡರ್‌ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಯುಪಿಐ (UPI) ಅಥವಾ ಡೆಬಿಟ್ ಕಾರ್ಡ್ ಮೂಲಕ ಡಿಜಿಟಲ್ ಪಾವತಿ ಮಾಡಬೇಕು. ಕೂಡಲೇ ಎಟಿಎಂ ಮಷಿನ್ ಗ್ಯಾಸ್ ತುಂಬಿದ ಸಿಲಿಂಡರ್ ಬಿಡುಗಡೆ ಮಾಡುತ್ತದೆ.  ಜತೆಗೆ ಖಾಲಿ ಸಿಲಿಂಡರ್ ಅನ್ನು ತನ್ನೊಳಗೆ ಸಂಗ್ರಹಿಸುತ್ತದೆ.

*ಎಟಿಎಂ‌ನಲ್ಲಿ ಏಕಕಾಲದಲ್ಲಿ 10 ಸಿಲಿಂಡರ್*

ಅಂದಹಾಗೆ, ಈ ಎಟಿಎಂ ಏಕಕಾಲಕ್ಕೆ 10 ಸಿಲಿಂಡರ್‌ಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಸಿಲಿಂಡರ್‌ಗಳ ಸಂಖ್ಯೆ ಎರಡಕ್ಕೆ ಇಳಿಕೆಯಾದಾಗ, ತಕ್ಷಣವೇ ಹತ್ತಿರದ ಗ್ಯಾಸ್ ಏಜೆನ್ಸಿಗೆ ಅಲರ್ಟ್ ಸಂದೇಶ ಹೋಗುತ್ತದೆ. ಆಗ ಏಜೆನ್ಸಿಯವರು ಬಂದು ಮತ್ತೆ ಸಿಲಿಂಡರ್ ತುಂಬಿಸುತ್ತಾರೆ. 

ಇದರಲ್ಲಿ ಬಳಕೆಯಾಗುವ ಕಾಂಪೋಸಿಟ್ ಸಿಲಿಂಡರ್‌ಗಳು ತುಕ್ಕು ಹಿಡಿಯುವುದಿಲ್ಲ, ಸಾಗಿಸಲು ಸುಲಭ ಮತ್ತು ಹೆಚ್ಚು ಸುರಕ್ಷಿತ. ಗ್ರಾಹಕರು ತಮ್ಮ ಹಳೆಯ ಕಬ್ಬಿಣದ ಸಿಲಿಂಡರ್‌ಗಳನ್ನು ನೀಡಿ ಇವುಗಳನ್ನು ಪಡೆದುಕೊಳ್ಳುವ ಅವಕಾಶವೂ ಇಲ್ಲಿದೆ. ಈ ಎಟಿಎಂ ಸೌಲಭ್ಯದಿಂದ ಜನರು ಇನ್ಮುಂದೆ ಗ್ಯಾಸ್ ಡೆಲಿವರಿ ಬಾಯ್‌ಗಳಿಗಾಗಿ ಅಥವಾ ಡೆಲಿವರಿ ಸಮಯಕ್ಕಾಗಿ ಜನರು ಕಾಯುವುದು ತಪ್ಪಿದಂತಾಗಿದೆ.