ಕಾರವಾರ: ಗ್ರಾಹಕರ ಠೇವಣಿ ಹಿಂತಿರುಗಿಸದೇ ಅವರಿಗೆ ಉಂಡೇ ನಾಮ ಹಾಕಿ,  ತನ್ನ ಬ್ಯಾಂಕಿಂಗ್ ಚಟುವಟಿಕೆಗಳನ್ನೇ ಸ್ಥಗಿತಗೊಳಿಸಿದೆ ಕಾರವಾರ ಅರ್ಬನ್‌ ಬ್ಯಾಂಕ್‌ ನ ಆಡಳಿತ ಮಂಡಳಿ. ‌ಈ ನಡುವೆ ನಗರಸಭೆಯಿಂದ ಲೀಸ್‌ ಮೇಲೆ ಪಡೆದ ಭೂಮಿಯನ್ನು ಲೀಸ್ ಅವಧಿ ಮುಗಿದರೂ ನವೀಕರಣ ಮಾಡದೇ ಬ್ಯಾಂಕ್ ನ ಆಸ್ತಿಯು ನಗರಸಭೆಯ ಪಾಲಾಗುವ ಸ್ಥಿತಿಯನ್ನು ಕೂಡಾ ಆಡಳಿತ ಮಂಡಳಿ ಸೃಷ್ಠಿಸಿದೆ.

ಈಗಾಗಲೇ ಬ್ಯಾಂಕ್‌ ದಿವಾಳಿಯಾಗಿರುವ ಹಿನ್ನೆಲೆ ಕಾರವಾರ ಅರ್ಬನ್‌ ಬ್ಯಾಂಕ್‌ನ ಪರವಾನಿಗೆಯನ್ನು ಭಾರತೀಯ ರಿಸರ್ವ ಬ್ಯಾಂಕ್‌ ರದ್ದುಗೊಳಿಸಿದೆ. ಬ್ಯಾಂಕ್ ನಲ್ಲಿ ಠೇವಣಿಯಿಟ್ಟಿದ್ದ ಸಾವಿರಾರು ಬೀದಿಬದಿ‌ ವ್ಯಾಪಾರಿಗಳು, ಕಾರ್ಮಿಕರು, ಬಡ ಹಾಗೂ ಮಧ್ಯಮವರ್ಗದವರು ತಮ್ಮ‌ ಠೇವಣಿ ಹಣಕ್ಕಾಗಿ ಬ್ಯಾಂಕ್ ಗೆ ಎಡತಾಕುತ್ತಿದ್ದಾರೆ.

ಬ್ಯಾಂಕ್‌ ನಡೆಸುವ ಉದ್ಧೇಶದಿಂದ ನಗರಸಭೆಯಿಂದ ನಗರದ ಹೃದಯ ಭಾಗದಲ್ಲಿ ಸುಮಾರು ನಾಲ್ಕು ಗುಂಟೆಗೂ ಹೆಚ್ಚು ಜಾಗವನ್ನು ಲೀಸ್‌ ಅವಧಿ ಮೇಲೆ ಹಂಚಿಕೆ ಮಾಡಲಾಗಿತ್ತು. ಆದರೆ, ಈ ಲೀಸ್‌ ಅವಧಿ 2017 ರಲ್ಲಿಯೇ ಮುಕ್ತಾಯಗೊಂಡಿದೆ ಎಂಬುದು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಯಿಂದ ಬಹಿರಂಗಗೊಂಡಿದೆ. ಬ್ಯಾಂಕ್ ಆಡಳಿತ ಮಂಡಳಿ ಲೀಸ್ ನವೀಕರಣ ಮಾಡದೇ ಸುಮ್ಮನಿದ್ದದ್ದು ಯಾಕೆ? ಇವೆಲ್ಲವೂ ಗೊತ್ತಿದ್ದೇ‌ ವ್ಯವಸ್ಥಿತವಾಗಿ ಬ್ಯಾಂಕ್ ಮುಳುಗಿಸಲಾಯಿತೆ? ಇದರಲ್ಲಿ ಆಡಳಿತ ಮಂಡಳಿಯ ದುರುದ್ದೇಶವಿತ್ತೇ ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ‌ ವಲಯದಲ್ಲಿ‌ ಮೂಡತೊಡಗಿದೆ‌.

ಒಂದರ‌ ಮೇಲೊಂದು ಅವಾಂತರಗಳನ್ನು ಸೃಷ್ಠಿಸಿಕೊಂಡಿರುವ ಬ್ಯಾಂಕ್ ನ ಆಡಳಿತ ಮಂಡಳಿಯವರು, ಬ್ಯಾಂಕ್ ಗೆ ದೊರೆತ ಲೀಸ್ ಆಸ್ತಿಯಲ್ಲಿ ಕೆಲ‌ವು ಭಾಗಗಳನ್ನು ನಿಯಮ‌ ಬಾಹಿರವಾಗಿ ಮಾರಾಟ ಮಾಡಿದ್ದಾರೆ. ಈ ಲೀಸ್ ಆಸ್ತಿಯ ಕೆಲವು ಭಾಗ ಮಾರಾಟ ಮಾಡಲು ಸಾಧ್ಯವಾಗಿದ್ದಾದ್ರೂ ಹೇಗೆ..? ಇದರಲ್ಲಿ ಆಡಳಿತ ಮಂಡಳಿ ಸದಸ್ಯರು ಹಾಗೂ ನೋಂದಣಿ ಕಚೇರಿಯ ಸಿಬ್ಬಂದಿ ಶಾಮೀಲಾಗಿರುವ ಸಾಧ್ಯತೆಯ ಬಗ್ಗೆ ಗುಮಾನಿಯಿದೆ. ಮಳಿಗೆ ಮಾರಾಟದ ಹಣ ಯಾರ ಜೇಬು ಸೇರಿದೆ ? ಎಂಬಿತ್ಯಾದಿ ಬಗ್ಗೆಯೂ ಸಂಪೂರ್ಣ ತನಿಖೆಯಾಗಬೇಕಿದೆ.

ಈ ಪ್ರಕರಣದ ಬಗ್ಗೆ newswaveskannada.com ಜೊತೆ ಮಾತನಾಡಿದ ಹಿರಿಯ ಕಾನೂನು ತಜ್ಞರೊಬ್ಬರು, “ಲೀಸ್ ಪಡೆದ ಮೇಲೆ ಲೀಸ್ ದಾರರು ಕೇವಲ ಬಳಕೆದಾರರು ಮಾತ್ರ ಹೊರತು ಮಾಲಕರಲ್ಲ. ಅದರ ಮಾಲಕರು ನಗರಸಭೆಯೇ ಆಗಿರುತ್ತದೆ. ಇನ್ನು ಲೀಸ್ ಆಸ್ತಿಯನ್ನು ಸಬ್ ಲೀಸ್ ಅಥವಾ ಮಾರಾಟ‌ ಮಾಡಲು ಸಾಧ್ಯವೇ ಇಲ್ಲ. ಇದು ಕಾನೂನಿನ ಸ್ಪಷ್ಟ‌ ಉಲ್ಲಂಘನೆ” ಎನ್ನುತ್ತಾರೆ.

ಕಾರವಾರ ಅರ್ಬನ ಬ್ಯಾಂಕ್‌ ನ ಭೂಮಿಯ ಲೀಸ್‌ ಅವಧಿ ಮುಗಿದು ಎಂಟು ವರ್ಷಗಳು ಕಳೆದರೂ ಈವರೆಗೂ ನಗರಸಭೆಯು ತನ್ನ ತಾಬಾಕ್ಕೆ ಪಡೆಯದೇ ದಿನ ದೂಡುತ್ತಿರುವುದು ಹತ್ತು ಹಲವು ಅನುಮಾನಕ್ಕೆ ಕಾರಣವಾಗಿದೆ. ಇದರ ವಿರುದ್ಧ ಕ್ರಮಕ್ಕೆ ಮುಂದಾಗದಂತೆ ಯಾವ ‘ಸ್ವರ’ ನಗರಸಭೆಯ ಮೇಲೆ ಒತ್ತಡ ಹೇರುತ್ತಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆಯಾಗಿದ್ದು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕಾದ ಅವಶ್ಯಕತೆಯಿದೆ.

ಸುನಾಮಿ ಅಪ್ಪಳಿಸಿ ಹೋದ ನಂತರದ ಪರಿಸ್ಥಿತಿಯಲ್ಲಿರುವ ಕಾರವಾರ ನಗರಸಭೆಯ ಆಡಳಿತವನ್ನು ಏದುಸಿರು ಬಿಡುತ್ತಾ ನಿಧಾನವಾಗಿ ಹಂತಹಂತವಾಗಿ ನಿಯಂತ್ರಣಕ್ಕೆ ತರುತ್ತಿರುವ ಕ್ರೀಯಾಶೀಲ ಕಮಿಷನರ್ ಜಗದೀಶ ಹುಲಿಗೆಜ್ಜೆ ಅವರು, ಕೂಡಲೇ ಲೀಸ್ ಮುಗಿದಿರುವ ಬ್ಯಾಂಕ್ ನ ಆಸ್ತಿಯನ್ನು ನಗರಸಭೆಯ ತಾಬಾಕ್ಕೆ ಪಡೆಯಬೇಕಿದೆ. ಇನ್ನು ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಅವರು ಸಹ ಯಾವುದೇ ಒತ್ತಡಕ್ಕೆ ಮಣಿಯದೇ ಈ ನೆಲದ‌ ಕಾನೂನು ಎಲ್ಲರಿಗೂ ಒಂದೇ ಎನ್ನುವಂತೆ ನಿಯಮಾನುಸಾರ ಕ್ರಮಕ್ಕೆ ಮುಂದಾಗಿ, ಹಣ ಕಳೆದುಕೊಂಡ ಜನರಿಗೆ ನ್ಯಾಯ ಒದಗಿಸಿಕೊಡುತ್ತಾರೆಯೇ ಎಂದು ಕಾದು ನೋಡಬೇಕಿದೆ.