Sirsi| ರಾಜ್ಯದ ​ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಯಶವಂತಪುರ-ಶಿವಮೊಗ್ಗ ಟೌನ್ ನಡುವೆ ಸಂಚರಿಸುವ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲನ್ನು (16581/16582) ತಾತ್ಕಾಲಿಕವಾಗಿ ತಾಳಗುಪ್ಪದವರೆಗೆ ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ ಎಂದು ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ತಿಳಿಸಿದ್ದಾರೆ.

ಶಿರಸಿ ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರ ಹಿತದೃಷ್ಟಿಯಿಂದ ವಿಶೇಷ ರೈಲು ಸೌಲಭ್ಯ ಒದಗಿಸುವಂತೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಮಾಡಲಾಗಿತ್ತು. ಈ ಮನವಿಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಹಾಗೂ ರೈಲ್ವೆ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ.

​ಅದರಂತೆ ಮಾರ್ಚ್ 1ರ ಭಾನುವಾರದಂದು ಯಶವಂತಪುರದಿಂದ ಮಧ್ಯರಾತ್ರಿ 12.15ಕ್ಕೆ ಹೊರಡುವ ರೈಲು ಸಂಖ್ಯೆ 16581 ಶಿವಮೊಗ್ಗದ ಬದಲಾಗಿ ಬೆಳಿಗ್ಗೆ 9 ಗಂಟೆಗೆ ತಾಳಗುಪ್ಪ ತಲುಪಲಿದೆ. ಅದೇ ದಿನ ರಾತ್ರಿ 10 ಗಂಟೆಗೆ ತಾಳಗುಪ್ಪದಿಂದಲೇ ತನ್ನ ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 16582 ಮರುದಿನ ಬೆಳಿಗ್ಗೆ 4.45ಕ್ಕೆ ಯಶವಂತಪುರ ತಲುಪಲಿದೆ.

ಸಾರ್ವಜನಿಕರು ಹಾಗೂ ಶಿರಸಿ ಮಾರಿಕಾಂಬಾ ದೇವಿಯ ಭಕ್ತಾದಿಗಳು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸದ ಕಾಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.