Sirsi| ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಜನಜಂಗುಳಿಯಲ್ಲಿ ಮಹಿಳೆಯೊಬ್ಬರ ಚೀಲದಲ್ಲಿದ್ದ ಅಂದಾಜು ಮೌಲ್ಯದ 3.52 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನೇ ಕಳ್ಳ ಎಗರಿಸಿದ ಘಟನೆ ಶಿರಸಿಯಲ್ಲಿ ನಡೆದಿದೆ.
ಹೊನ್ನಾವರ ತಾಲೂಕಿನ ಇಡಗುಂಜಿಯ ಹಾಮಾಕ್ಕಿಯ ಮಾದೇವಿ ರಾಮಚಂದ್ರ ನಾಯ್ಕ (43) ಎಂಬುವವರೇ ಚಿನ್ನ ಬಸ್ ಏರುವಾಗ ಚಿನ್ನ ಕಳೆದುಕೊಂಡವರು. ಇವರು ಮೇ.19ರ ಸೋಮವಾರ ಮಧ್ಯಾಹ್ನ 2.15 ರ ಸುಮಾರಿಗೆ ಚಂದ್ರಗುತ್ತಿ-ಹರಿಶಿ ಬಸ್‌ನ್ನು ತನ್ನ ಮಗ, ಆತನ ಅತ್ತೆ ಜೊತೆ ಸೇರಿ ಹತ್ತುತ್ತಿದ್ದಾಗ, ಜನಜಂಗುಳಿಯಲ್ಲಿ ಮಾದೇವಿ ನಾಯ್ಕ ಅವರು ತನ್ನ ಬಂಗಾರದ ಆಭರಣಗಳನ್ನು ಬಾಕ್ಸ್ ನಲ್ಲಿ ಹಾಕಿಟ್ಟುಕೊಂಡಿದ್ದ ವೆನಿಟಿ ಬ್ಯಾಗಿನ ಜಿಪ್‌ನ್ನು ಕಳ್ಳ ಮೆಲ್ಲನೆ ಯಾರಿಗೂ ತಿಳಿಯದಂತೆ ತೆರೆದು ಬ್ಯಾಗಿನಲ್ಲಿದ್ದ ಚಿನ್ನಾಭರಣಗಳನ್ನು ಎಗರಿಸಿದ್ದಾನೆ. ಅದರಲ್ಲಿ 18 ಗ್ರಾಂ ಬಂಗಾರದ ಶಾರ್ಟ ನೆಕ್ಲೆಸ್, 30 ಗ್ರಾಂನ ಬಂಗಾರದ ಹಾರ, 2 ಗ್ರಾಂನ ಬಂಗಾರದ ಉಂಗುರ ಹಾಗೂ 10 ಗ್ರಾಂನ ಬೆಳ್ಳಿ ನಾಣ್ಯ ಸೇರಿದಂತೆ ಒಟ್ಟು 3.52 ಲಕ್ಷದ ಮೌಲ್ಯದ ಚಿನ್ನಾಭರಣ ಕಳ್ಳ ಎಗರಿಸಿದ್ದಾನೆ.
ಶಿರಸಿ ನಗರ ಪೋಲಿಸ್ ಠಾಣೆಯಲ್ಲಿ ಚಿನ್ನ ಕಳ್ಳತನದ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.
