Karwar| ಕುಡಿದ ಮತ್ತಿನಲ್ಲಿ ಕಟ್ಟಡ ಕಾರ್ಮಿಕನೊಬ್ಬನ ಹತ್ಯೆ ಮಾಡಿದ ಘಟನೆ ಅಸ್ನೋಟಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಹತ್ಯೆಯಾದವನನ್ನು ಗುಜರಾತ್ ಮೂಲದ ಕಾರ್ಮಿಕ ದೆವೇಶ ರಾಥೋಡ (28) ಎಂದು ಗುರುತಿಸಲಾಗಿದೆ. ಆತನೊಂದಿಗೆ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಶಿರೂರು ಹಳ್ಳಿಯ ಶಿವಾನಂದ ನಾಯ್ಕರ (45) ಮತ್ತು ಹಾವೇರಿ ಜಿಲ್ಲೆ ಸವಣೂರಿನ ಮರಿಯಪ್ಪಾ ಹರಿಜನ (43) ಎಂಬುವವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಮದ್ಯದ ಮತ್ತಿನಲ್ಲಿ ನಡೆದ ಗಲಾಟೆಯಲ್ಲಿ ಹತ್ಯೆ ನಡೆದಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಮಿಕರು ಅಸ್ನೋಟಿಯಲ್ಲಿ ನಿವೃತ್ತ ನೌಕರ ಕಮಲಕಾರ ಗಡಕರ ಎಂಬುವವರು ಕಟ್ಟಿಸುತ್ತಿದ್ದ ಮನೆ ನಿರ್ಮಾಣಕ್ಕೆ ಗಾರೆ ಕೆಲಸ ಮಾಡಲು ಬಂದವರಾಗಿದ್ದರು. ಚಿತ್ತಾಕುಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
