Ankola| ಗಂಗಾವಳಿ ನದಿಯಲ್ಲಿ ಶೇಖರಣೆಗೊಂಡಿರುವ ಶಿರೂರು ಗುಡ್ಡದ ಮಣ್ಣು ತೆರವಿಗೆ ಬ್ಯಾತಿ ಮೆಟ್ರಿಕ್ ಸರ್ವೇ (Bathymetric Survey) ಕಾರ್ಯ ಆರಂಭಿಸಲಾಗಿದೆ.
ಇಂದು ಮಂಗಳವಾರ ಬಂದರು ಇಲಾಖೆಯ ಇಂಜಿನಿಯರ್ ರಾಜ್ ಕುಮಾರ್ ಹೆಡೆ, ಜಿಲ್ಲಾಧಿಕಾರಿ ಕಚೇರಿಯ ಪ್ರಾಕೃತಿಕ ವಿಕೋಪ ವಿಭಾಗದ ಸಹಾಯಕ ನಿರ್ದೇಶಕ ಪ್ರಶಾಂತ್ ಈ ಬ್ಯಾತಿ ಮೆಟ್ರಿಕ್ ಸರ್ವೆ ಕಾರ್ಯದಲ್ಲಿ ಭಾಗವಹಿಸಿದ್ದರು. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಅಗತ್ಯ ಯಂತ್ರೋಪಕರಣಗಳ ನೆರವಿನಿಂದ ನದಿಯಲ್ಲಿನ ಮಣ್ಣು ತೆರವು ಕಾರ್ಯ ಆರಂಭಗೊಳ್ಳಲಿದೆ.
2024ರ ಜುಲೈನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತ ಸಂಭವಿಸಿತ್ತು. ಈ ದುರಂತದಲ್ಲಿ ಹನ್ನೊಂದು ಜನ ಸಾವನ್ನಪ್ಪಿದ್ದರು. ಘಟನೆಯಲ್ಲಿ ಗುಡ್ಡದ ಅಪಾರ ಪ್ರಮಾಣದ ಕಲ್ಲು, ಮಣ್ಣುಗಳು ಗಂಗಾವಳಿ ನದಿಯ ಒಡಲು ಸೇರಿತ್ತು. ನಂತರ ಅದೇ ಮಣ್ಣು ಕಲ್ಲುಗಳು ನದಿ ಮಧ್ಯೆ ಶೇಖರಣೆಗೊಂಡು ದಿಬ್ಬವಾಗಿತ್ತು.
ಏನಿದು ಬ್ಯಾತಿ ಮೆಟ್ರಿಕ್ ಸರ್ವೇ? ಬ್ಯಾತಿ ಮೆಟ್ರಿಕ್ ಸರ್ವೆ’ (Bathymetric Survey) ಎಂದರೆ ನೀರಿನ ಆಳವನ್ನು ಅಳೆಯುವುದು ಮತ್ತು ಜಲಸಮೂಹದ ತಳಭಾಗದ ನಕ್ಷೆಯನ್ನು ತಯಾರಿಸುವುದು. ನದಿ, ಸರೋವರ, ಸಮುದ್ರ ಅಥವಾ ಅಣೆಕಟ್ಟಿನ ನೀರು ನಿಂತ ಪ್ರದೇಶಗಳ ಆಳವನ್ನು ನಿಖರವಾಗಿ ಗುರುತಿಸಲು ಇದನ್ನು ಬಳಸಲಾಗುತ್ತದೆ. ನೀರಿನ ತಳಭಾಗವು ಯಾವ ರೀತಿಯಾಗಿದೆ ಬಂಡೆಗಳು, ಹಳ್ಳಗಳು, ಹೂಳು ತುಂಬಿದ ಪ್ರದೇಶಗಳು ಎಂದು ತಿಳಿಯಲು ಇದು ಸಹಾಯ ಮಾಡುತ್ತದೆ.
ಇದನ್ನು ಶಬ್ದದ ಅಲೆಗಳನ್ನು ಬಳಸಿ (ಸೋನಾರ್ Sonar) ನೀರಿನ ಆಳವನ್ನು ಲೆಕ್ಕಹಾಕಲಾಗುತ್ತದೆ. ಅಲ್ಲದೇ ಲಿಡಾರ್ (Lidar) ಮತ್ತು ಜಿಪಿಎಸ್ (GPS) ಮೂಲಕ ಲೇಸರ್ ಕಿರಣಗಳು ಮತ್ತು ಉಪಗ್ರಹ ತಂತ್ರಜ್ಞಾನದ ಮೂಲಕ ನಿಖರವಾದ ಸ್ಥಳ ಮತ್ತು ಅಳತೆಯನ್ನು ಬಳಸಿ ನಿರ್ಧರಿಸಲಾಗುತ್ತದೆ.
ಇದನ್ನು ಬಹುತೇಕವಾಗಿ ಜಲಾಶಯಗಳು ಮತ್ತು ಅಣೆಕಟ್ಟುಗಳಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯ ಎಷ್ಟು ಉಳಿದಿದೆ ಮತ್ತು ಎಷ್ಟು ಹೂಳು ತುಂಬಿಕೊಂಡಿದೆ (Siltation) ಎಂಬುದನ್ನು ಅಳೆಯಲು ಇದು ಅತ್ಯಗತ್ಯ.
