Karwar| ಜಿಲ್ಲೆಯ ಕಡಲತೀರಗಳು ಹಾಗೂ ನದಿಗಳಲ್ಲಿ ಪ್ರವಾಸಿಗರ ಬೋಟಿಂಗ್ ಮತ್ತು ಜಲಸಾಹಸ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದ ಪ್ರವಾಸೋದ್ಯಮ ಇಲಾಖೆ, ಕೇವಲ ಎರಡು ದಿನಗಳ ಅಂತರದಲ್ಲೇ ತನ್ನದೇ ಆದೇಶವನ್ನು ಹಿಂಪಡೆದು ಮತ್ತೆ ಚಟುವಟಿಕೆಗಳಿಗೆ ಅನುಮತಿ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಚಂಡಮಾರುತ, ಭಾರಿ ಗಾಳಿಯ ಮುನ್ಸೂಚನೆ ಹಾಗೂ ಮಳೆಗಾಲ ಆರಂಭದ ಹಿನ್ನೆಲೆಯಲ್ಲಿ, ಮೇ 18ರಂದು ಜಿಲ್ಲೆಯ ವಿವಿಧ ಕಡಲತೀರಗಳು ಮತ್ತು ನದಿ ಪ್ರದೇಶಗಳಲ್ಲಿ ಬೋಟಿಂಗ್ ಹಾಗೂ ಜಲಸಾಹಸ ಕ್ರೀಡೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿ ಪ್ರವಾಸೋದ್ಯಮ ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶದ ಅನ್ವಯ ಕುಮಟಾ ತಾಲೂಕಿನ ಗೋಕರ್ಣ ಮೇನ್ ಬೀಚ್, ಓಂ ಬೀಚ್, ಕೂಡೆ ಬೀಚ್, ಹಾಫ್ ಮೂನ್ ಬೀಚ್, ಪ್ಯಾರಡೈಸ್ ಬೀಚ್, ಭಟ್ಕಳ ತಾಲೂಕಿನ ಮುರುಡೇಶ್ವರ ಬೀಚ್, ಕಾರವಾರ ಬೀಚ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಸಿ ಬೋಟಿಂಗ್ ಹಾಗೂ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳನ್ನು ನಿಲ್ಲಿಸಲಾಗಿತ್ತು. ಇದಲ್ಲದೆ ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್, ಕುಮಟಾದ ತದಡಿ-ಅಘನಾಶಿನಿ ನದಿ ತೀರ, ಹೊನ್ನಾವರ ಮತ್ತು ಕಾಸರಕೋಡು ಭಾಗದ ಶರಾವತಿ ಹಿನ್ನೀರು ಪ್ರದೇಶಗಳಲ್ಲಿ ಬೋಟಿಂಗ್ ಚಟುವಟಿಕೆಗಳಿಗೂ ನಿರ್ಬಂಧ ವಿಧಿಸಲಾಗಿತ್ತು. ಅಪ್ಸರಕೊಂಡ ಬೀಚ್‌ನಲ್ಲಿ ಪ್ರೀ-ವೆಡ್ಡಿಂಗ್ ಶೂಟಿಂಗ್‌ಗೂ ತಡೆ ನೀಡಲಾಗಿತ್ತು.
ಆದರೆ, ಇದೇ ಇಲಾಖೆ ಮೇ 20ರಂದು ಹೊಸ ಆದೇಶ ಹೊರಡಿಸಿ, ‘ಮೇ 19ರ ಸಂಜೆಯಿಂದ ಕಡಲತೀರದಲ್ಲಿ ಅಲೆಗಳ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು’, ದೂರದ ಊರುಗಳಿಂದ ಆಗಮಿಸುವ ಪ್ರವಾಸಿಗರಿಗೆ ನಿರಾಸೆಯಾಗಬಾರದು ಎಂಬ ಕಾರಣ ನೀಡಿ ಜಲಸಾಹಸ ಚಟುವಟಿಕೆಗಳನ್ನು ಮತ್ತೆ ಮುಂದುವರಿಸಲು ಅನುಮತಿ ನೀಡಿದೆ. ಇದರಿಂದ ಇಲಾಖೆಯ ಕ್ರಮದ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ. ಒಂದು ಕಡೆ ಮುರುಡೇಶ್ವರ ಮತ್ತು ಗೋಕರ್ಣ ಕಡಲತೀರಗಳಲ್ಲಿ ಪೊಲೀಸರು ಮೈಕ್ ಮೂಲಕ ಸಮುದ್ರದ ಅಲೆಗಳ ಅಬ್ಬರ ಹೆಚ್ಚಿರುವುದಾಗಿ ಎಚ್ಚರಿಕೆ ನೀಡುತ್ತಾ ಪ್ರವಾಸಿಗರನ್ನು ನೀರಿಗಿಳಿಯದಂತೆ ಮನವಿ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಪ್ರವಾಸೋದ್ಯಮ ಇಲಾಖೆ ವಾಟರ್ ಸ್ಪೋರ್ಟ್ಸ್ ನಡೆಸಲು ಅವಕಾಶ ನೀಡಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವ ಸಂದರ್ಭದಲ್ಲೇ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅನುಮತಿ ನೀಡಿರುವ ಕ್ರಮದ ಹಿಂದೆ ಪ್ರವಾಸೋದ್ಯಮ ಲಾಬಿಯ ಒತ್ತಡವಿದೆಯೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಒಟ್ಟಾರೆ ಪ್ರವಾಸೋದ್ಯಮ ಇಲಾಖೆಯ ಈ ನಿರ್ಧಾರವು, ಪ್ರವಾಸಿಗರ ಭದ್ರತೆ ಮತ್ತು ಪ್ರವಾಸೋದ್ಯಮದ ನಡುವಿನ ಸಮತೋಲನ ಕಾಯ್ದುಕೊಳ್ಳುವಲ್ಲಿ ಇಲಾಖೆ ಗೊಂದಲದ ನಿರ್ಧಾರ ಕೈಗೊಂಡಿದೆಯೇ ಎಂಬ ಚರ್ಚೆಗೆ ಕಾರಣವಾಗಿದೆ.
