Dandeli| ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ತಾಮೀರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ ಭಾರಿ ಹಣಕಾಸು ಅವ್ಯವಹಾರ ಬೆಳಕಿಗೆ ಬಂದಿದ್ದು, ನಕಲಿ ಚಿನ್ನ ಇಟ್ಟು ಸಾಲ ಮಂಜೂರು ಮಾಡಿ, ಸಿಬ್ಬಂದಿಗಳೇ ಸೊಸೈಟಿಗೆ ಬರೊಬ್ಬರಿ 5.90 ಕೋಟಿ ರೂ. ಪಂಗನಾಮ ಹಾಕಿದ್ದಾರೆ.
ತಾಮೀರ್ ಸೊಸೈಟಿಯ ದಾಂಡೇಲಿಯ ಶಾಖಾ ವ್ಯವಸ್ಥಾಪಕ ಮೀರ್ ಕರೀಂ ಮೀರ್ ಇಸ್ಮಾಯಿಲ್, ಖಲೀಮೂದ್ದೀನ್ ಖಾನ್ ಸರದಾರ್ ಖಾನ್, ಗುಮಾಸ್ತೆ ಹಾಗೂ ಕ್ಯಾಶಿಯರ್ ಮಂಚಾಲಿ ಚೂಡಾಮಣಿ ನೇತ್ರೇಕರ್, ನಿವೃತ್ತ ಸಿಬ್ಬಂದಿ ಮೊಹ್ಮದ್ ಹನೀಫದ ಖಾಸಿಂಸಾಬ್ ಮೋಮೀನ್, ಇಬ್ರಾಹಿಂ ಗುಲಾಮ್ ಮೊಹಿದ್ದೀನ್, ಸಿಪಾಯಿ ನೂರ್ ಅಹ್ಮದ ಉಸ್ಮಾನಸಾಬ ಮುಲ್ಲಾ, ಕ್ಲರ್ಕ್ ಗಳಾದ ಫಯಾಜ ಅಹ್ಮದ ಅಬ್ದುಲ್ಲಾ ಶೇಖ, ಶ್ರೀಮತಿ ಹಲೀಮಾಬಿ ಬಶೀರ ಖಾನ ಹಾಗೂ ಸರಾಫ್ ಸಂಜಯ ಸದಾನಂದ ರೇವಣಕರ ಸೇರಿದಂತೆ ಒಟ್ಟು ಒಂಬತ್ತು ಜನ ತಾವು ಕೆಲಸ ಮಾಡುವ ಸೊಸೈಟಿಗೆ ತಿರುಪತಿ ನಾಮ ಹಾಕಿದವರು.
ಆರೋಪಿಗಳು 2021 ಮಾರ್ಚ್ 17ರಿಂದ 2024 ಜನವರಿ 2ರವರೆಗೆ ಸಂಚು ರೂಪಿಸಿ, ನಕಲಿ ಚಿನ್ನವನ್ನು ಸೊಸೈಟಿಯಲ್ಲಿ ಇಟ್ಟು ಸುಳ್ಳು ಸಾಲಗಾರರ ಹೆಸರಿನಲ್ಲಿ ಸಾಲ ಮಂಜೂರು ಮಾಡಿದ್ದಾರೆ. ಸಾಲ ಪಡೆಯುವ ವೇಳೆ ಅಗತ್ಯವಿರುವ ಕೆವೈಸಿ (KYC) ಹಾಗೂ ಭದ್ರತಾ ದಾಖಲೆಗಳನ್ನು ಸಲ್ಲಿಸದೇ, ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಮೂಲಕ ಒಟ್ಟು 208 ಖಾತೆಗಳ ಮೂಲಕ 5,09,09,450ರೂ. ಮೊತ್ತವನ್ನು ಸ್ವಂತಕ್ಕೆ ಬಳಸಿಕೊಂಡು ಸೊಸೈಟಿಗೆ ವಂಚನೆ ಮಾಡಿದ್ದಾರೆ. ಈ ಹಣವು ಸಾವಿರಾರು ಸದಸ್ಯರ ಹಣವಾಗಿರುವುದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ.
2023-24ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ಈ ಅಕ್ರಮಗಳು ಬೆಳಕಿಗೆ ಬಂದಿದ್ದು, 2025 ಜೂನ್ 20ರಂದು ವರದಿ ಸಲ್ಲಿಕೆಯಾಗಿತ್ತು. ಆಡಳಿತ ಮಂಡಳಿ ಇಲ್ಲದ ಹಿನ್ನೆಲೆ ಆಡಳಿತಾಧಿಕಾರಿಗಳೊಂದಿಗೆ ಚರ್ಚಿಸಿ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಮೊಹ್ಮದ ಅಜೀಮ್ ರುಕ್ಸುದ್ದೀನ್ ಶೇಖ್ ದಾಂಡೇಲಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದ ಸಂಪೂರ್ಣ ತನಿಖೆ ಕೈಗೊಂಡಿದ್ದಾರೆ.
