Karwar| ಕಾರವಾರದ ನೇವಲ್ ಶಿಪ್ ರಿಪೇರ್ ಯಾರ್ಡ್ (Naval Ship Repair Yard-NSRY) ಆವರಣದಲ್ಲಿ ಬುಧವಾರ  ‘ಬಡಾಖಾನಾ’ ನಡೆಯಿತು. ಇದರಲ್ಲಿ ಸುಮಾರು 1,700 ಕ್ಕೂ ಹೆಚ್ಚು ಸಿಬ್ಬಂದಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಈ ಕಾರ್ಯಕ್ರಮದಲ್ಲಿ ನೌಕಾಪಡೆಯ ಸೈನಿಕರು, ರಕ್ಷಣಾ ನಾಗರಿಕ ಸಿಬ್ಬಂದಿ,  ಸಿಬ್ಬಂದಿಗಳು, ಮಿಲಿಟರಿ ಇಂಜಿನಿಯರ್ ಸೇವೆಯ ಸಿಬ್ಬಂದಿ ಹಾಗೂ ನೇಮಕಾತಿಗೊಂಡ ಕಾರ್ಮಿಕರು ಸೇರಿದಂತೆ ಹಲವರು ಭಾಗವಹಿಸಿದ್ದರು.

 

ಕಾರ್ಯಕ್ರಮದ ಅಂಗವಾಗಿ ಪ್ರತೀ ವಿಭಾಗ ಮತ್ತು ವೃತ್ತಿಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಿಬ್ಬಂದಿಗೆ ಅಡ್ಮಿರಲ್ ಸೂಪರಿಂಟೆಂಡೆಂಟ್ ರವನೀಶ್ ಸೇಟ್ ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಿದರು. ಬಳಿಕ ಮಾತನಾಡಿದ ಅವರು, ಯಾರ್ಡ್ ಸಿಬ್ಬಂದಿಯ ವಿಶ್ವಾಸಾರ್ಹತೆ, ದಿಟ್ಟತನ ಮತ್ತು ಬಹುಮುಖತೆಯನ್ನು ಶ್ಲಾಘಿಸಿದರು‌. ಅಲ್ಲದೇ, ಎಲ್ಲಾ ಕಾರ್ಯಗಳನ್ನು ಗುಣಮಟ್ಟ, ಸಮಯಪಾಲನೆ ಮತ್ತು ಶೈಲಿಯೊಂದಿಗೆ ಯಶಸ್ವಿಯಾಗಿ ನೆರವೇರಿಸುವಲ್ಲಿ ಸಿಬ್ಬಂದಿ ಪಾತ್ರ ಮಹತ್ತರವಾಗಿದೆ ಎಂದರು. ಒಟ್ಟಾರೆ, ಈ ಕಾರ್ಯಕ್ರಮವು ಸಿಬ್ಬಂದಿಯ ಒಗ್ಗಟ್ಟು ಮತ್ತು ತಂಡದ ಮನೋಬಲವನ್ನು ಮತ್ತಷ್ಟು ಹೆಚ್ಚಿಸಿದಂತೂ ಸತ್ಯ.

‘ಬಡಾಖಾನಾ’ದ ಬಗ್ಗೆ ಒಂದಿಷ್ಟು: ಬಡಾಖಾನಾ’ (Bada Khana) ಎನ್ನುವುದು ಭಾರತೀಯ ಸಶಸ್ತ್ರ ಪಡೆಗಳಾದ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಆಚರಿಸಲಾಗುವ ಒಂದು ವಿಶೇಷ ಔತಣಕೂಟ ಅಥವಾ ಸಾಮೂಹಿಕ ಭೋಜನ.

ಅದು ಸೈನಿಕರು ಮತ್ತು ಅಧಿಕಾರಿಗಳು ಭೇದವಿಲ್ಲದೆ ಒಟ್ಟಾಗಿ ಕುಳಿತು ಊಟ ಮಾಡುವ ಒಂದು ಕಾರ್ಯಕ್ರಮ ಸಹ ಹೌದು. ಯೂನಿಟ್ ಡೇ ಅಥವಾ ವಿಶೇಷ ಸಂದರ್ಭಗಳಲ್ಲಿ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳು ಒಂದೇ ಕಡೆ ಕುಳಿತು ಒಟ್ಟಿಗೆ ಊಟ ಮಾಡುವ ಒಂದು ಪದ್ಧತಿ. 

ಈ ಸಮಯದಲ್ಲಿ ಹಿರಿಯ ಅಧಿಕಾರಿಗಳು ಸೈನಿಕರೊಂದಿಗೆ ಮುಕ್ತವಾಗಿ ಸಂವಾದ ನಡೆಸುತ್ತಾರೆ ಮತ್ತು ಅವರ ಯೋಗಕ್ಷೇಮವನ್ನು ವಿಚಾರಿಸುತ್ತಾರೆ. ಭೋಜನದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಂಗೀತದ ವ್ಯವಸ್ಥೆಯೂ ಸಹ ಇರುತ್ತದೆ.

 ಇದು ಸೈನಿಕರ ನಡುವೆ ಏಕತೆ, ಸಹೋದರತ್ವ ಮತ್ತು ಒಗ್ಗಟ್ಟಿನ ಭಾವನೆ ಮೂಡಿಸಲು ಸಹಾಯಕ.  ಇದರ ಇನ್ನೊಂದು ವಿಶೇಷತೆಯೆಂದರೆ ಹಿರಿಯ ಅಧಿಕಾರಿಗಳು ಕಿರಿಯ ಸೈನಿಕರಿಗೆ ಆಹಾರ ಬಡಿಸುವ ಮೂಲಕ ಬಾಂಧವ್ಯವನ್ನು ಹೆಚ್ಚಿಸುತ್ತಾರೆ. 

 ಸಂಕ್ಷಿಪ್ತವಾಗಿ ಹೇಳುವುದಾದರೆ ‘ಬಡಾಖಾನಾ’ ಸೇನಾ ಶಿಸ್ತಿನ ನಡುವೆಯೂ ಸೌಹಾರ್ದತೆಯನ್ನು ಬಲಪಡಿಸುವ ಒಂದು ಭೋಜನಕೂಟ ಅಷ್ಟೇ.