Koppala| ಕೊಪ್ಪಳ ಜಿಲ್ಲೆಯಲ್ಲಿ 21 ವರ್ಷಗಳ ಹಿಂದೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಅಪರಾಧಿಗೆ ಗಂಗಾವತಿಯ ಹೆಚ್ಚುವರಿ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪ್ರಕರಣಕ್ಕೆ ದೀರ್ಘಕಾಲದ ಬಳಿಕ ನ್ಯಾಯ ದೊರಕಿರುವುದರಿಂದ ವಿಶೇಷವಾಗಿ ಗಮನ ಸೆಳೆದಿದೆ.

ಕನಕಗಿರಿ ತಾಲೂಕಿನ ಬೈಲಕಂಪುರ ಗ್ರಾಮದ ಪರಶುರಾಮ್ ಅಲಿಯಾಸ್ ರಾಮಣ್ಣ ಎಂಬಾತನೇ ಪ್ರಕರಣದ ಅಪರಾಧಿ. ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ, ದುರಗಪ್ಪ ಎಂಬ ವ್ಯಕ್ತಿಯನ್ನು 2004ರ ಜನವರಿ 15ರಂದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ.

ತನ್ನ ಪತ್ನಿ ಮತ್ತು ದುರಗಪ್ಪನ ನಡುವೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದಿಂದ ಕೋಪಗೊಂಡಿದ್ದ ಪರಶುರಾಮ್, ಅವರನ್ನು ಮನೆಯಲ್ಲೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದ. ಕೋಪದಿಂದ ಮನೆದಲ್ಲಿದ್ದ ಚಾಕುವಿನಿಂದ ದುರಗಪ್ಪನಿಗೆ ಇರಿದು ಆತನನ್ನು ಗಂಭೀರವಾಗಿ ಗಾಯಗೊಳಿಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ದುರಗಪ್ಪನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಆತ ಮೃತಪಟ್ಟಿದ್ದ. ಘಟನೆ ಸಂಬಂಧಿಸಿ ಪರಶುರಾಮ್ ಪತ್ನಿ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಪ್ರಕರಣ ದಾಖಲಾಗುತ್ತಿದ್ದಂತೇ ತಲೆಮರೆಸಿಕೊಂಡು ಓಡಿಹೋಗಿದ್ದ ಪರಶುರಾಮ ತನ್ನ ಹೆಸರು ಮತ್ತು ವೇಷ ಬದಲಿಸಿಕೊಂಡು ಬೆಂಗಳೂರಿನಲ್ಲಿ ಸುಮಾರು 21 ವರ್ಷಗಳ ಕಾಲ ಜೀವನ ನಡೆಸುತ್ತಿದ್ದ.

ದೀರ್ಘಕಾಲದ ಹುಡುಕಾಟದ ಬಳಿಕ, 2025ರಲ್ಲಿ ಪೊಲೀಸರು ಪರಶುರಾಮ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧನದ ನಂತರ ಪ್ರಕರಣದ ವಿಚಾರಣೆ ವೇಗ ಪಡೆದುಕೊಂಡಿದ್ದು, ಗಂಗಾವತಿ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.

 ಪ್ರಕರಣದ ಎಲ್ಲಾ ಸಾಕ್ಷ್ಯಾಧಾರಗಳು ಮತ್ತು ವಾದಗಳನ್ನು ಪರಿಗಣಿಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರು, ಆರೋಪಿ ಪರಶುರಾಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಈ ತೀರ್ಪಿನಿಂದ 21 ವರ್ಷಗಳ ಹಳೆಯ ಪ್ರಕರಣಕ್ಕೆ ನ್ಯಾಯ ದೊರೆತಂತಾಗಿದೆ. ಅಪರಾಧಿಗಳು ತಲೆ ಮರೆಸಿಕೊಂಡು ಎಷ್ಟೇ ವರ್ಷ, ಎಷ್ಟೇ ದೂರ ಹೋದರೂ ಕಾನೂನಿನ ಕೈಯಿಂದ ತಪ್ಪಿಸಲಾಗಲ್ಲ ಅನ್ನೋದಕ್ಕೆ ಈ ಘಟನೆ ಒಂದು ಉದಾಹರಣೆ.