ಮುರುಡೇಶ್ವರ ಕಲ್ಲು ತೂರಾಟ ಪ್ರಕರಣದ ಆರೋಪಿಗಳಾದ ಅಪ್ರಾಪ್ತ ಮುಸ್ಲಿಂ ಯುವಕರ ವೈದ್ಯಕೀಯ ಪರೀಕ್ಷೆಯ ವರದಿ ಹೊರಬಂದಿದ್ದು, ವರದಿಯಲ್ಲಿ ಅವರು ಗಾಂಜಾ ಸೇವಿಸಿದ್ದರು ಎಂದು ತಿಳಿದುಬಂದಿದೆ.
ಕಳೆದ ಸೋಮವಾರ ರಾತ್ರಿ ಮುರುಡೇಶ್ವರದ ಬೈಲೂರು ಮಾರ್ಗದ ತೆಂಗಾರ್ ರಸ್ತೆಯಲ್ಲಿನ ಕೆಲ ಹಿಂದೂಗಳ ಮನೆ ಮೇಲೆ ಕಲ್ಲು ತೂರಾಟ ಘಟನೆ ನಡೆದಿತ್ತು.
ರಾತ್ರಿ ಬೈಕ್‌ನಲ್ಲಿ ಬಂದಿದ್ದ ಅಪ್ರಾಪ್ತ ಮುಸ್ಲಿಂ ಯುವಕರಿಂದ ಹಿಂದೂಗಳ ಮನೆ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿದ್ದರು. ಘಟನೆಯ ವೇಳೆ ಸ್ಥಳೀಯರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದ್ದ ಐವರು ಯುವಕರನ್ನು ಹಿಡಿದಿದ್ದರು. ಉಳಿದಿಬ್ಬರು ಯುವಕರು ಸ್ಥಳದಿಂದ ಪರಾರಿಯಾಗಿದ್ದರು.

ಸ್ಥಳೀಯರು ಹಾಗೂ ಹಿಂದೂ ಪರ ಸಂಘಟನೆಯವರು ಹಿಡಿದ ಐವರು ಯುವಕರನ್ನು ಮುರುಡೇಶ್ವರ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ನಂತರ ಈ ಯವಕರ ಬಾಯಿ ಬಿಡಿಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ಇಬ್ಬರನ್ನೂ ಸಹ ಪೋಲಿಸರು ವಶಕ್ಕೆ ಪಡೆದಿದ್ದರು.
ಘಟನೆಗೆ ಸಂಬಂಧಿಸಿಂತೆ ಸೋಮವಾರ ರಾತ್ರಿ ಹಿಂದೂ ಜಾಗರಣಾ ವೇದಿಕೆ ಮುಖಂಡರು ಹಾಗೂ ಕಾರ್ಯಕರ್ತರು ಮುರುಡೇಶ್ವರ ಠಾಣೆಗೆ ಮುತ್ತಿಗೆ ಹಾಕಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಇದರಿಂದ ಮರುಡೇಶ್ವರ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿತ್ತು, ಘಟನೆ ನಡೆದ ಕೂಡಲೇ ಮುರುಡೇಶ್ವರಕ್ಕೆ ಧಾವಿಸಿದ್ದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಹಾಗೂ ಎಎಸ್‌ಪಿ ಕೃಷ್ಣಮೂರ್ತಿ ಪ್ರತಿಭಟನಾಕಾರರ ಮನವೊಲಿಸಿ, ಪ್ರಕರಣ ಬೇರೆ ರೂಪ ಪಡೆಯದಂತೆ ನಿಯಂತ್ರಿಸಿದ್ದರು.
ಪ್ರಕರಣ ಸಂಬಂಧಿಸಿ ಏಳು ಮಂದಿ ಅಪ್ರಾಪ್ತ ಮುಸ್ಲಿಂ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಶಕ್ಕೆ ಪಡೆದಿದ್ದ ಅಪ್ರಾಪ್ತ ಯುವಕರ ವೈದ್ಯಕೀಯ ಪರೀಕ್ಷೆ ನಡೆಸಿದಾಗ, ವರದಿಯಲ್ಲಿ ಈ ಅಪ್ರಾಪ್ತ ಯುವಕರೆಲ್ಲರೂ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಈ ಬಾಲಕರನ್ನು ಕಾರವಾರದ ಮಕ್ಕಳ ರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಇನ್ನು ಈ ಅಪ್ರಾಪ್ತರಿಗೆ ಬೈಕ್ ಕೊಟ್ಟಿದ್ದ ಹಿನ್ನೆಲೆಯಲ್ಲಿ ಅವರ ಪೋಷಕರ ಮೇಲೆ ಪೊಲೀಸರು ದಂಡ ವಿಧಿಸಿದ್ದಾರೆ.
