Another fast connection to coastal Karnataka| Vandebharat Express Train| Karwar| ಕರ್ನಾಟಕ ರಾಜಧಾನಿ ಬೆಂಗಳೂರು ಮತ್ತು ಗೋವಾದ ಪ್ರಮುಖ ನಗರ ಮಡಗಾಂವ್ ನಡುವೆ ಬಹು ನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express) ಸಂಚಾರ ಶೀಘ್ರದಲ್ಲೇ ಆರಂಭವಾಗಲಿದ್ದು, ಈ ವಂದೇ ಭಾರತ ರೈಲು ಆರಂಭವಾದಲ್ಲಿ ಕರಾವಳಿ ಕರ್ನಾಟಕ ಮತ್ತು ಗೋವಾ ನಡುವೆ ವೇಗದ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಹೊಸ ಆಯಾಮ ಸಿಗಲಿದೆ.
ಪ್ರಸ್ತುತ ಬೆಂಗಳೂರು–ಗೋವಾ ಮಾರ್ಗದಲ್ಲಿ ಸಂಚರಿಸುವ ರೈಲುಗಳು 12 ರಿಂದ 14 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳುತ್ತಿವೆ. ಆದರೆ, ವಂದೇ ಭಾರತ್ ರೈಲು ಸಂಚಾರ ಆರಂಭವಾದಲ್ಲಿ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಐಟಿ ಉದ್ಯೋಗಿಗಳು, ಪ್ರವಾಸಿಗರು ಹಾಗೂ ವ್ಯಾಪಾರ ವಲಯದ ಜನರಿಗೆ ಇದು ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಇದರೊಂದಿಗೆ ರಾಜ್ಯಗಳ ನಡುವಿನ ಸಂಬಂಧ ಹಾಗೂ ವ್ಯಾಪಾರ ಬಲಗೊಳ್ಳಲು ಕೂಡಾ ಸಹಕಾರಿ.
ಕರ್ನಾಟಕದ ಕರಾವಳಿ ಭಾಗವಾದ ದಕ್ಷಿಣಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರು ಕೂಡಾ ಈ ಸೇವೆಯಿಂದ ಹೆಚ್ಚಿನ ಲಾಭ ಪಡೆಯಲಿದ್ದಾರೆ. ಜೊತೆಗೆ ಜಿಲ್ಲೆಯ ಗೋಕರ್ಣ, ಮುರುಡೇಶ್ವರ ಸೇರಿದಂತೆ ಕರಾವಳಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚು ಬೆಳೆಯುವ ನಿರೀಕ್ಷೆಯಿದೆ.
ಇನ್ನು ಗೋವಾ ಪ್ರವಾಸಕ್ಕೆ ತೆರಳುವವರಿಗೆ ವೇಗದ ಸಂಪರ್ಕ ಸಿಗುವುದರಿಂದ ವಾರಾಂತ್ಯ ಪ್ರವಾಸಗಳು ಹೆಚ್ಚುವ ಸಾಧ್ಯತೆಯಿದೆ. ವಂದೇ ಭಾರತ್ ರೈಲುಗಳಲ್ಲಿ ಆಧುನಿಕ ಆಸನ ವ್ಯವಸ್ಥೆ, ಜಿಪಿಎಸ್ ಆಧಾರಿತ ಮಾಹಿತಿ ಪ್ರದರ್ಶನ, ಬಯೋ – ವ್ಯಾಕ್ಯೂಮ್ ಶೌಚಾಲಯ, ಉತ್ತಮ ಭದ್ರತಾ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳಿವೆ. ದೇಶದ ವಿವಿಧ ನಗರಗಳನ್ನು ಸಂಪರ್ಕಿಸುತ್ತಿರುವ ಈ ರೈಲು ಸೇವೆ ಈಗ ಬೆಂಗಳೂರು – ಮಡಗಾಂವ ಮಾರ್ಗದಲ್ಲೂ ಆರಂಭವಾದರೆ, ದಕ್ಷಿಣ ಪಶ್ಚಿಮ ರೈಲ್ವೆ ವಲಯಕ್ಕೆ ಮತ್ತೊಂದು ಮಹತ್ವದ ಸೇರ್ಪಡೆ ಆಗಲಿದೆ.

ಇನ್ನು ಈ ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಯಾಣದ ಬಗ್ಗೆ ಕೆಲ ಲಾಬಿಗಳು, ಮಂಗಳೂರು, ಉಡುಪಿ, ಕಾರವಾರದಲ್ಲಿ ರೈಲಿಗೆ ನಿಲುಗಡೆ ಇಲ್ಲ ಎಂಬ ವದಂತಿ ಹರಡುತ್ತಿದೆ. ಆದರೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರಾವಳಿಯ ಪ್ರದೇಶವಾದ ಮಂಗಳೂರು, ಉಡುಪಿ, ಕಾರವಾರವು ಸೇರಿದಂತೆ ಅಗತ್ಯ ಇದ್ದೆಡೆ ವಂದೇ ಭಾರತ್ ರೈಲು ನಿಲುಗಡೆಗೆ ಪ್ರಸ್ತಾವನೆ ನೀಡಲಾಗಿದೆ ಎಂದು ಸ್ಪಷ್ಪಪಡಿಸಿ, ಇದು ರೈಲ್ವೆ ಇತಿಹಾಸದಲ್ಲಿಯೇ ರಾಜಧಾನಿಗೆ ಕರಾವಳಿ ಪ್ರದೇಶವನ್ನು ಬೆಸೆಯುತ್ತಿರುವ ಮೋದಿ ಸರಕಾರದ ಸಾಧನೆಯಾಗಲಿದೆ ಎಂದು ತಮ್ಮ ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಬೀಗಿದ್ದಾರೆ.
ಆದರೆ, ರೈಲು ಆರಂಭದ ನಿಖರ ದಿನಾಂಕ ಮತ್ತು ವೇಳಾಪಟ್ಟಿ ಕುರಿತು ರೈಲ್ವೆ ಇಲಾಖೆಯಿಂದ ಅಧಿಕೃತ ಪ್ರಕಟಣೆ ನಿರೀಕ್ಷೆಯಿದ್ದು, ಸದ್ಯದಲ್ಲಿಯೇ ಅಧಿಕೃತವಾಗಿ ಘೋಷಣೆಯಾಗಲಿದೆ.
ಒಟ್ಟಿನಲ್ಲಿ ಬೆಂಗಳೂರು– ಮಡಗಾಂವ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾದಲ್ಲಿ ಕರ್ನಾಟಕ– ಗೋವಾ ನಡುವಿನ ಸಂಪರ್ಕ ಮತ್ತಷ್ಟು ಬಲವಾಗುವ ಜೊತೆಗೆ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ಸಿಗಲಿದೆ ಎಂಬ ನಿರೀಕ್ಷೆ ಇದೆ.
