Karwar| ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿ, 27.5 ಲೀಟರ್ ಮದ್ಯವನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.

ಮಾಜಾಳಿ ತನಿಖಾ ಠಾಣೆ ವ್ಯಾಪ್ತಿಯಲ್ಲಿ ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ಕಾರವಾರ ವಲಯದ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಪಾಸಣೆ ನಡೆಸಿದಾಗ, ಗೋವಾದಿಂದ ಕಾರವಾರದ ಕಡೆಗೆ ಎರಡು ಚೀಲಗಳನ್ನು ಹೊತ್ತುಕೊಂಡು ಬರುತ್ತಿದ್ದ ಮಹಿಳೆ ಕಂಡುಬಂದಳು. ಆಕೆಯನ್ನು ತಡೆದು ಪರಿಶೀಲಿಸಿದಾಗ ಎರಡು ಪ್ರತ್ಯೇಕ ಚೀಲಗಳಲ್ಲಿ 750 ಮಿಲಿ ಸಾಮರ್ಥ್ಯದ ಗೋವಾ ರಾಜ್ಯದ ಮದ್ಯದ 37 ಬಾಟಲಿಗಳು ಪತ್ತೆಯಾಗಿ, ಒಟ್ಟು 27.5 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಯಿತು.

ಆರೋಪಿತ ಮಹಿಳೆಯನ್ನು ಹಾಗೂ ವಶಪಡಿಸಿಕೊಂಡ ಮದ್ಯವನ್ನು ಮುಂದಿನ ಕ್ರಮಕ್ಕಾಗಿ ಕಾರವಾರ ವಲಯದ ಅಬಕಾರಿ ಉಪನಿರೀಕ್ಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗೋವಾ ಅಕ್ರಮ ಸಾರಾಯಿಯ ವಿರುದ್ಧ ಸಣ್ಣ ಬಲೆ ಬಿಸಿ ಕಾರ್ಯಾಚರಣೆ ನಡೆಸುತ್ತಿರುವ ಅಬಕಾರಿ‌ ಇಲಾಖೆಯ ಅಧಿಕಾರಿಗಳು, ಮುಂದಿನ‌ ದಿನಗಳಲ್ಲಿ ದೊಡ್ಡ‌ ಬಲೆ‌ ಬಳಸಿ ದೊಡ್ಡ ದೊಡ್ಡ‌ ಅಕ್ರಮ ಸರಾಯಿ‌ ಕುಳಗಳನ್ನು ಈ ಬಲೆ ಬಿಸಿ‌ ಹಿಡಿಯಲಿ ಎಂಬುದು ಮದ್ಯ ವಿರೋಧಿಗಳ ಒತ್ತಾಯ.