Karwar| ಇಲ್ಲಿನ ರಾಷ್ಟ್ರೀಯ ಹೆದ್ದಾರಿ-66ರ ಕೋಡಿಬಾಗದ ಉಜ್ವಲಲಕ್ಷ್ಮೀ ಹಾಲ್ ಸಮೀಪ ಬುಧವಾರ ಬೆಳಿಗ್ಗೆ ಟೊಯೋಟಾ ಫಾರ್ಚೂನರ್ ಹಾಗೂ ಮಹೇಂದ್ರ ಬೊಲೆರೋ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬೊಲೆರೋ ವಾಹನ ಪಲ್ಟಿಯಾಗಿ ಇಬ್ಬರು ಗಾಯಗೊಂಡಿದ್ದಾರೆ.

ಕುಮಟಾ ನಿವಾಸಿ ಲಕ್ಷ್ಮಣಸಿಂಗ್ ಮಂಗುಸಿಂಗ್ ರಾಥೋಡ (31) ಅವರು ಚಲಾಯಿಸುತ್ತಿದ್ದ ಟೊಯೋಟಾ ಫಾರ್ಚೂನರ್ (ಕೆಎ-47-ಪಿ-0786) ವಾಹನವು ಚಿತ್ತಾಕುಲ ಕಡೆಯಿಂದ ಕಾರವಾರದತ್ತ ಬರುತ್ತಿತ್ತು. ಬೆಳಿಗ್ಗೆ ಸುಮಾರು 8.20ರ ವೇಳೆಗೆ ಕೋಡಿಬಾಗದ ಉಜ್ವಲಲಕ್ಷ್ಮೀ ಹಾಲ್ ಸಮೀಪ ಮುಂದೆ ಸಾಗುತ್ತಿದ್ದ ಮಹೇಂದ್ರ ಬೊಲೆರೋ (ಕೆಎ-30-ಎ-4297) ವಾಹನವನ್ನು ಓವರ್‌ಟೇಕ್ ಮಾಡಲು ಯತ್ನಿಸಿದ ವೇಳೆ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಬೊಲೆರೋ ವಾಹನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಅಪಘಾತದಲ್ಲಿ ಬೊಲೆರೋದಲ್ಲಿದ್ದ ಉತ್ತರ ಪ್ರದೇಶ ಮೂಲದ, ಸದ್ಯ ಸದಾಶಿವಗಡದಲ್ಲಿ ವಾಸವಿರುವ ಸುಶೀಲಕುಮಾರ ಜವಾಹರಲಾಲ್ (34) ಹಾಗೂ ನಿಪ್ಪಾಣಿ ಮೂಲದ ಅಭಿಜೀತ್ ಸುರೇಶ್ ನಾಯ್ಕ (39) ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರೂ ಇಂಜಿನಿಯರ್‌ಗಳಾಗಿದ್ದಾರೆ.
ಅಪಘಾತದ ವೇಳೆ ಬೊಲೆರೋ ವಾಹನವನ್ನು ಚಿತ್ತಾಕುಲದ ದೇಸಾಯಿವಾಡ ನಿವಾಸಿ ಮೈಕಲ್ ಬೈತುರ ಡಿನಿಜ್ (57) ಚಾಲನೆ ಮಾಡುತ್ತಿದ್ದರು. ಅವರ ದೂರಿನ ಮೇರೆಗೆ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತಕ್ಕೆ ಕಾರಣವಾದ ಆರೋಪದಡಿ ಫಾರ್ಚೂನರ್ ಚಾಲಕ ಲಕ್ಷ್ಮಣಸಿಂಗ್ ಮಂಗುಸಿಂಗ್ ರಾಥೋಡ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
