ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ– ಬೈಲೂರು ಮಾರ್ಗದ ತೆಂಗಾರ್ ರಸ್ತೆಯ ಅಕ್ಕಪಕ್ಕದ ಕೆಲವು ಹಿಂದೂ ಮನೆಗಳ ಮೇಲೆ ಅಪ್ರಾಪ್ತ ಮುಸ್ಲಿಂ ಯುವಕರು ಕಲ್ಲು ತೂರಾಟ ಮಾಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಈ ಪ್ರಕರಣ ಸಂಬಂಧಿಸಿ ಮುರುಡೇಶ್ವರ ಠಾಣಾ ಪೊಲೀಸರು ಆರು ಮಂದಿ ಅಪ್ರಾಪ್ತ ಮುಸ್ಲಿಂ ಯುವಕರನ್ನು ವಶಕ್ಕೆ ಪಡೆದಿದ್ದಾರೆ. 9, 10ನೇ ತರಗತಿ ವಿದ್ಯಾರ್ಥಿಗಳಾಗಿರುವ ಈ ಯುವಕರು ಬೈಕ್‌ನಲ್ಲಿ ಬಂದು ಏಕಾಏಕಿ ಕಲ್ಲುತೂರಾಟ ನಡೆಸಿದ್ದಾರೆ. ಬೈಕ್‌ನಲ್ಲಿ ಬಂದ ಆರು ಅಪ್ರಾಪ್ತ ಮುಸ್ಲಿಂ ಯುವಕರ ಪೈಕಿ ಮೂವರು ಏಕಾಏಕಿ ಮನೆಗಳತ್ತ ಕಲ್ಲು ತೂರಿ ಆತಂಕ ಸೃಷ್ಟಿಸಿದ್ದರು.

ಘಟನೆಯ ವೇಳೆ ಸ್ಥಳೀಯರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಇಬ್ಬರು ಯುವಕರನ್ನು ಹಿಡಿದಿದ್ದು, ಉಳಿದವರು ಪರಾರಿಯಾಗಿದ್ದರು. ಹಿಡಿದಂತಹ ಇಬ್ಬರು ಯುವಕರಿಗೆ ಮುರುಡೇಶ್ವರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಘಟನೆ ಸಂಬಂಧಿಸಿ ಹಿಂದೂ ಜಾಗರಣಾ ವೇದಿಕೆ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸ್ ಠಾಣೆಗೆ ದೌಡಾಯಿಸಿ ಮುತ್ತಿಗೆ ಹಾಕಿದ್ದರು‌. ಅಲ್ಲದೇ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಪೊಲೀಸರು ಸ್ಥಳೀಯ ಯುವಕರ ವಿಚಾರಣೆ ನಡೆಸಿ ಒಟ್ಟು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರನ್ನು ಮೆಡಿಕಲ್‌ಗೆ ಪೊಲೀಸರು ಕರೆದೊಯ್ದಿದ್ದು, ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಆದರೆ, ಹಿಂದೂ ಮುಖಂಡರ ನೇತೃತ್ವದಲ್ಲಿ ಠಾಣೆಯ ಮುಂದೆ ಪ್ರತಿಭಟನೆ ಮುಂದುವರಿದಿದ್ದು, ಪೊಲೀಸರು ನಿಯಂತ್ರಿಸಲು ಹರಸಾಹಸಪಡುತ್ತಿದ್ದಾರೆ.

ಸದ್ಯ ಈ ಕಲ್ಲು ತೂರಾಟದಿಂದ ಮುರುಡೇಶ್ವರ– ಬೈಲೂರು ಮಾರ್ಗದ ತೆಂಗಾರ್ ಪ್ರದೇಶ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಸ್ಥಳಕ್ಕೆ ಡಿವೈಎಸ್‌ಪಿ, ಎಎಸ್‌ಪಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ‌ ದೀಪನ್ ಎಂ.ಎನ್ ಭೇಟಿ ನೀಡಿದ್ದು, ಪ್ರತಿಭಟನಾಕಾರರ ಮನವೊಲಿಸಲು ಮುಂದಾಗಿದ್ದಾರೆ.