Karwar| ಹಳೆಯ ಗೀತಾಂಜಲಿ ಟಾಕೀಸ್‌ ಹತ್ತಿರ ಶಾಸಕ ಸೈಲ್‌ ಅವರು ಮೂರು ಎಕ್ರೆ ಅಲ್ಲ, ಕೇವಲ ಮೂವತ್ತು ಗುಂಟೆ ಮತ್ತು ಎರಡು ಗುಂಟೆ ಅಷ್ಟೇ ಜಾಗ ಹೊಂದಿದ್ದಾರೆ ಎಂದು ಕೆಪಿಸಿಸಿ ಜಿಲ್ಲಾ ವಕ್ತಾರ ಕೆ. ಶಂಭು ಶೆಟ್ಟಿ ಸ್ಪಷ್ಟಪಡಿಸಿದ್ದಾರೆ

ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಳೆಯ ಗೀತಾಂಜಲಿ ಟಾಕೀಸ್‌ ಪಕ್ಕ ಸೈಲ್‌ ಮೂರು ಎಕ್ರೆ ಜಮೀನು ಹೊಂದಿದ್ದು, ಈ ಜಮೀನಿಗೆ ತೆರಳಲು ದಾರಿ ಮಾಡಿಕೊಳ್ಳುವ ಉದ್ದೇಶದಿಂದ ಹಳೆಯ ಬಸ್‌ ಸ್ಟಾಪ್‌ ನ್ನು ನಗರದ ಹಿಂದು ಹೈಸ್ಕೂಲ್‌ ಬಳಿ ಸ್ಥಳಾಂತರಿಸಲು ಮುಂದಾಗಿದ್ದಾರೆ ಎಂಬ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದರು.

ಮೈಸೂರು ಮಹಾರಾಜರು ಮತ್ತು ಸೈಲ್‌: ಮೈಸೂರು ಮಹಾರಾಜರು ಮೈಸೂರಿನಾದ್ಯಂತ ಹಲವೆಡೆ ಆಸ್ತಿಯನ್ನು ಹೊಂದಿದ್ದಾರೆ. ಈಗ ಅವರು ಸಂಸದರಾಗಿದ್ದು, ನಗರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದರೂ, ಅಲ್ಲೇ ಹತ್ತೀರದಲ್ಲೇ ಅವರ ಆಸ್ತಿ ಇರಬಹುದು. ಹಾಗಂತ ಅವರು ತಮ್ಮ ಆಸ್ತಿಗೆ ಅನುಕೂಲತೆ ಮಾಡಿಕೊಳ್ಳಲು ಅಭಿವೃದ್ಧಿ ಕಾಮಗಾರಿ ನಡೆಸಿದ್ದಾರೆ ಎಂದು ದೂರಲು ಆಗುತ್ತದೆಯೇ ಎಂದು ಪ್ರಶ್ನಿಸಿದ ಶಂಭು ಶೆಟ್ಟಿ, ಶಾಸಕ ಸತೀಶ ಸೈಲ್‌ ಏಳು ನೂರರಿಂದ ಎಂಟು ನೂರು ಕೋಟಿ ವ್ಯವಹಾರ ಹೊಂದಿರುವ ಒಬ್ಬ ಉದ್ಯಮಿಯಾಗಿದ್ದು, ಅವರು ತಮ್ಮ ದುಡಿಮೆ, ಪರಿಶ್ರಮದ ಹಣದಿಂದ ಹಲವೆಡೆ ಆಸ್ತಿ ಖರೀದಿಸಿರಬಹುದು. ಆದರೆ ಅವರ ಆಸ್ತಿಗೆ ಅನುಕೂಲ ಮಾಡುವ ಉದ್ದೇಶದಿಂದ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ ಎಂದು ಹೇಳುವುದು ಸರಿಯಲ್ಲ. ಬಸ್ ಸ್ಟಾಪ್‌ ಸ್ಥಳಾಂತರವನ್ನು ಸೈಲ್‌ ಅವರ ಆಸ್ತಿಗೆ ತಳುಕು ಹಾಕುವುದು ಸರಿಯಲ್ಲ ಎಂದು ಶಂಭು ಶೆಟ್ಟಿ ಹೇಳಿದರು.

ಫುಟಪಾತಲ್ಲೇ ಬಸ್‌ ಸ್ಟಾಫ್‌: ಫುಟ್‌ ಪಾತ್‌ಲ್ಲೆ ಬಸ್‌ ಸ್ಟಾಪ್‌ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿಕೆಗೆ ತಿರುಗೇಟು ನೀಡಿದ ಶಂಭು ಶೆಟ್ಟಿ, ನಗರದ ಡಿಸಿ ಕಚೇರಿ ಎದುರು, ಬಿಣಗಾ, ಅವರ್ಸಾ ಸೇರಿದಂತೆ ಹಲವೆಡೆ ಫುಟ್‌ ಪಾತ್‌ ಮೇಲೆಯೇ ಬಸ್ ಸ್ಟಾಪ್‌ ನಿರ್ಮಿಸಲಾಗಿದೆ. ಇನ್ನು ನಗರದ ಹಿಂದು ಹೈಸ್ಕೂಲ್ ಬಳಿ ಹಲವು ವರ್ಷಗಳ ಹಿಂದೆ ಬಸ್‌ ಸ್ಟಾಪ್‌ ಇದ್ದುದನ್ನು ನೆನಪಿಸಿದರು.

ನಗರಕ್ಕೆ ಮತ್ತೀಷ್ಟು ಬಸ್‌ ಸ್ಟಾಪ್‌: ವಿದ್ಯಾರ್ಥಿಗಳು, ಗ್ರಾಮೀಣ ಜನರು ಸೇರಿದಂತೆ ಎಲ್ಲಾ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಿತ್ರ ಸಮಾಜ, ನಗರಸಭೆ ಹಾಗೂ ಈಗ ನಿರ್ಮಿಸಲಾಗುತ್ತಿರುವ ಬಸ್ ಸ್ಟಾಪ್‌ ಎದುರು ಸೇರಿದಂತೆ ಹಲವು ಬಸ್‌ ಸ್ಟಾಪ್‌ ನಿರ್ಮಾಣ ಮಾಡುವ ಚಿಂತನೆ ಶಾಸಕರದ್ದು. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಶಂಭು ಶೆಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರವಿಂದ ಕಲಗುಟಕರ್‌, ಬಾಬು ಶೇಖ್‌, ನೂತನ ಜೈನ್‌ ಸೇರಿದಂತೆ ಹಲವರು ಇದ್ದರು.