Karwar| ಇಲ್ಲಿನ ಕ್ರಿಮ್ಸ್‌ಗೆ ಹೊಸ ಎಂ.ಆರ್‍.ಐ ಯಂತ್ರ ಬಂದಿದ್ದನ್ನು ತಾನೇ ಮಾಡಿದ್ದು ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಮಾಜಿ ಶಾಸಕಿ ರೂಪಾಲಿ ನಾಯ್ಕ ವರ್ತನೆಯ ಬಗ್ಗೆ ಕೆಪಿಸಿಸಿ ಜಿಲ್ಲಾ ವಕ್ತಾರ ಕೆ.ಶಂಭು ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶೆಟ್ಟಿ, ಕಾರವಾರ ಸರಕಾರಿ ವೈದ್ಯಕೀಯ ಕಾಲೇಜಿನ ಸ್ಥಾಪನೆಯ ಹಿಂದೆ ಶಾಸಕ ಸತೀಶ ಸೈಲ್‌ ಅವರ ಸಾಕಷ್ಟು ಹೋರಾಟ, ಶ್ರಮ ಅಡಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಇಲ್ಲಿಗೆ ಕರೆಯಿಸಿ ಮಲ್ಟಿ ಸ್ಪೇಶಾಲಿಟಿ ಇದ್ದುದನ್ನು ಸೂಪರ್‌ ಸ್ಟೇಶಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೆರಿಸುವಂತೆ ಒತ್ತಡ ತಂದು, ಕೊನೆಗೆ ಬಜೆಟ್‌ನಲ್ಲಿ ಅನುದಾನ ಸಹ ಘೋಷಿಸಲು ಕಾರಣರಾಗಿದ್ದಾರೆ. ಅದೇ ರೀತಿ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದಂತೆ ಅಗತ್ಯವಾಗಿರುವ ವೈದ್ಯಕೀಯ ಉಪಕರಣಗಳನ್ನು ತರಲು ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದು ಶೆಟ್ಟಿ ಹೇಳಿದರು.

ಯಾರೋ ನೆಟ್ಟ ಮರ…: ಕ್ರಿಮ್ಸ್‌ಗೆ ಎಂ.ಆರ್‍.ಐ (MRI) ಉಪಕರಣ ಮಂಜೂರು ಮಾಡುವಂತೆ ಶಾಸಕ ಸತೀಶ ಸೈಲ್‌ ಅವರು ಬೆಂಗಳೂರು ಮಟ್ಟದಲ್ಲಿ ಮುಖ್ಯಮಂತ್ರಿಗಳು, ವೈದ್ಯಕೀಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಒತ್ತಾಯಿಸಿದ್ದರು. ಅದರಂತೆ 2024ರ ಅಕ್ಟೋಬರ್‌ ತಿಂಗಳಂದು ಕಾರವಾರ ಸೇರಿದಂತೆ ರಾಜ್ಯದಲ್ಲಿ ಒಟ್ಟು ಎಂಟು ವೈದ್ಯಕೀಯ ಕಾಲೇಜುಗಳಿಗೆ ಎಂ.ಆರ್‍.ಐ ಯಂತ್ರ ಖರೀದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಅದರಂತೆ ಈಗ ಕ್ರಿಮ್ಸ್‌ಗೆ ಎಂ.ಆರ್‍.ಐ ಯಂತ್ರ ಬಂದಿದ್ದು, ಅಳವಡಿಕೆ ಕಾರ್ಯ ಸಹ ನಡೆಯುತ್ತಿದೆ. ಆದರೆ ಇದ್ಯಾವುದರ ಬಗ್ಗೆ ಅರಿಯದ ಮಾಜಿ ಶಾಸಕಿ ರೂಪಾಲಿ ನಾಯ್ಕ, ಈ ಎಂ.ಆರ್‍.ಐ ಯಂತ್ರ ಬರಲು ತಾನು ಕಾರಣಿಕರ್ತೆ ಎಂಬಂತೆ ಪ್ರಚಾರ ಮಾಡಿಸಿಕೊಳ್ಳುತ್ತಿದ್ದಾರೆ. ಅವರ ಬಾಲಿಶಃ ವರ್ತನೆ ಒಂದು ರೀತಿ ಯಾರೋ ನೆಟ್ಟ ಮರದ ಕೆಳಗೆ ಅದರ ನೆರಳಿನಲ್ಲಿ ಕುಳಿತು, ಆಮರದ ಹಣ್ಣನ್ನು ತಿನ್ನುತ್ತಾ ಕೊನೆಗೆ ಈ ಮರ ತಾನೇ ನೆಟ್ಟಿದ್ದು ಎಂದು ಹೇಳುವಂತಿದೆ ಎಂದು ವ್ಯಂಗವಾಡಿದರು.

ಚೀಫ್‌ ಪಬ್ಲಿಸಿಟಿ: ರಾಜ್ಯದಲ್ಲಿ ನಮ್ಮ ಕಾಂಗ್ರೆಸ್‌ ಸರ್ಕಾರ ಇರುವಾಗ, ಬಿಜೆಪಿಗೆ ಸೇರಿದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಸರ್ಕಾರದ ಮೇಲೆ ಒತ್ತಡ ತಂದು ಎಂ.ಆರ್‍.ಐ ಯಂತ್ರ ತರಲು ಸಾಧ್ಯವೇ ಎಂದು ಪ್ರಶ್ನಿಸಿದ ಶಂಭು ಶೆಟ್ಟಿ, ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರದ್ದು ಒಂದು ರೀತಿ ಚೀಫ್‌ ಪಬ್ಲಿಸಿಟಿ ಎಂದು ಟೀಕಿಸಿದರು. ಸುಮ್ಮನೆ ಯಾರೋ ಮಾಡಿದ ಅಭಿವೃದ್ಧಿ ಕೆಲಸಗಳನ್ನು ತಾನೇ ಮಾಡಿಸಿದ್ದು ಎಂದು ಹೇಳುವ ಕೀಳು ರಾಜಕಾರಣವನ್ನು ಇನ್ನಾದರೂ ಬಿಡುವಂತೆ ಸಲಹೆ ನೀಡಿದ ಶಂಭು ಶೆಟ್ಟಿ, ಮಾಜಿ ಶಾಸಕಿ ಇನ್ನಾದರೂ ಜನರನ್ನು ದಾರಿ ತಪ್ಪಿಸುವ ಇಂಥ ಪ್ರಯತ್ನ ಮಾಡದಂತೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲಗುಟಕರ್‌, ಬಾಬು ಶೇಖ್‌, ನೂತನ ಜೈನ್‌ ಸೇರಿದಂತೆ ಹಲವರು ಇದ್ದರು.