ಕಾರವಾರದ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ನಡೆದ ಕೆಡಿಪಿ ಸಭೆ ಅನಿರೀಕ್ಷಿತ ಘಟನೆಯೊಂದಕ್ಕೆ ಸಾಕ್ಷಿಯಾಯಿತು.
ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಶಾಸಕ ಸತೀಶ ಸೈಲ್ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದು, ಅಸಮಾಧಾನಗೊಂಡ ಸೈಲ್ ಸಭೆ ನಡುವೆಯೇ ಎದ್ದು ಹೊರ ನಡೆದ ಘಟನೆ ನಡೆಯಿತು.
ಸಭೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆಯ ವಿಷಯ ಬಂದಾಗ, ಕೆಲ ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ ಎಂದು ಶಾಸಕ ಸೈಲ್ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ವೈದ್ಯ ಡಾಕ್ಟರೇ ಇಲ್ಲ ಅಂದ ಮೇಲೆ ಔಷಧಿ ಇದ್ದು ಏನು ಪ್ರಯೋಜನ ಎಂದು ಸೈಲ್ ಗೆ ಕಾಲೆಳೆಯುವ ಪ್ರಯತ್ನ ಮಾಡಿದರು.
ಆಗ ಸೈಲ್ ಡಾಕ್ಟರ್ ಗಳನ್ನು ತರುವುದು ಯಾರು? ಅದು ನನ್ನ ಕೆಲಸವಾ ಎಂದು ಸಚಿವ ವೈದ್ಯರಿಗೆ ತಿರುಗೇಟು ನೀಡಿದರು.
ಆಗ ಕೋಪಗೊಂಡ ಸಚಿವ ವೈದ್ಯ, ನೀವು ಸುಮ್ಮನೆ ಕುತ್ಕೊಳ್ಳಿ. ನಿಮ್ಮ ಕೈಯಲ್ಲಿ ಆಗಲ್ಲ ಅಂದರೆ ನಾನು ಮಾಡ್ತೇನೆ. ಸುಮ್ಮನೇ ಮಾತಾಡಬೇಡಿ ಎಂದರು.
ಸಿಟ್ಟಿಗೆದ್ದ ಸೈಲ್, ‘ನಾನು ಅಂಗೂಟಾ ಚಾಪ್ ಅಲ್ಲ’ ಎಂದು ಏರು ಧ್ವನಿಯಲ್ಲಿ ಮಾತನಾಡುತ್ತಾ ಸಭೆಯಿಂದ ಎದ್ದು ಹೋದರು. ಅವರನ್ನು ತಡೆಯುವ ಯತ್ನವನ್ನು ಉಸ್ತುವಾರಿ ಸಚಿವರು ಮಾಡಲಿಲ್ಲ.
ಆಡಳಿತ ಪಕ್ಷದ ಶಾಸಕ ಸೈಲ್ ಹಾಗೂ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನಡುವೆ ನೇರ ವಾಗ್ವಾದ ಅಧಿಕಾರಿಗಳಿಗೆ ದಿಗ್ಭ್ರಮೆ ತಂದಿತು.
ಹೊರ ಹೊಗುವಾಗ ಶಾಸಕ ಸೈಲ್, ನಾವು ಕೆಡಿಪಿ ಸಭೆಗೆ ಬರೋದು ಕೆಲವರಿಗೆ ಇಷ್ಟ ಇಲ್ಲ. ನೇರವಾಗಿ ಬೇಡ ಅಂದ್ರೆ ನಾವು ಬರಲ್ಲ. ನಮಗೆ ಹೇಗೋ ತಾಲೂಕು ಪಂಚಾಯತ ಸಭೆ ಇದೆ ಎಂದು ಗೊಣಗುತ್ತಾ ಹೊರಟರು.
ಸಚಿವರು ಹಾಗು ಶಾಸಕರ ಕೊಳಿ ಜಗಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಶಾಸಕ ಭೀಮಣ್ಣ ನಾಯ್ಕ, ಸಿಇಒ ದಿಲೀಶ್ ಶಶಿ ಸೇರಿದಂತೆ ಹಲವು ಅಧಿಕಾರಿಗಳು ಸಾಕ್ಷಿಯಾದರು.
